ರಾಜ್ಯ ಸರಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಿಜಯ ಭಾಸ್ಕರ್ ನೇಮಕ

0
22

ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಟಿ.ಎಂ.ವಿಜಯ ಭಾಸ್ಕರ್ ನೇಮಕವಾಗಿದ್ದಾರೆ.

ಬೆಂಗಳೂರು: ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಟಿ.ಎಂ.ವಿಜಯ ಭಾಸ್ಕರ್ ನೇಮಕವಾಗಿದ್ದಾರೆ. ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ 1983ನೇ ಬ್ಯಾಚಿನ ಐಎಎಸ್‌ ಅಧಿಕಾರಿಯಾಗಿರುವ ವಿಜಯ ಭಾಸ್ಕರ್‌ರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. 

ಇಲ್ಲಿಯವರೆಗೆ ಮುಖ್ಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಇಂದು ಸೇವೆಯಿಂದ ನಿವೃತ್ತಿಯಾಗುತ್ತಿರುವ ಕಾರಣ ವಿಜಯ ಭಾಸ್ಕರ್‌ರನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ರತ್ನಪ್ರಭಾ ಅವರ ಸೇವಾವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಲು ರಾಜ್ಯ ಸರಕಾರ ಕೇಂದ್ರ ಸರಕಾರದ ಅನುಮತಿ ಕೇಳಿತ್ತು. ಆದರೆ, ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅನಿವಾರ್ಯವಾಗಿ ಇಂದು ಮುಖ್ಯ ಕಾರ್ಯದರ್ಶಿಯ ಬದಲಾವಣೆ ಮಾಡಿದೆ. 

ಹಿರಿಯ ಐಎಎಸ್ ಅಧಿಕಾರಿ ರತ್ನಪ್ರಭಾ ಸೇವಾವಧಿ ವಿಸ್ತರಣೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಒಲವು ತೋರಿದ್ದರು. ಆದರೆ, ಇದಕ್ಕೆ ದೇವೇಗೌಡರು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಸೇವಾವಧಿ ವಿಸ್ತರಣೆಯ ನಿರ್ಧಾರವನ್ನು ರಾಜ್ಯ ಸರಕಾರ ಹಿಂಪಡೆದಿದೆ ಎಂದು ಹೇಳಲಾಗಿತ್ತು. ಆದರೆ, ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆಗಳ ಇಲಾಖೆ ಈ ಆರೋಪವನ್ನು ತಳ್ಳಿಹಾಕಿತ್ತು. ಇನ್ನೊಂದೆಡೆ, ಐಎಎಸ್ ಅಧಿಕಾರಿ ಡಿ.ವಿ.ಪ್ರಸಾದ್ ಸಹ ಮುಖ್ಯ ಕಾರ್ಯದರ್ಶಿಯಾಗುವ ರೇಸ್‌ನಲ್ಲಿದ್ದರಾದರೂ ಅಂತಿಮವಾಗಿ ಟಿ.ಎಂ.ವಿಜಯ ಭಾಸ್ಕರ್ ನೇಮಕಗೊಂಡಿದ್ದಾರೆ.