ರಾಜ್ಯ ಪೊಲೀಸರ ಖಾಕಿ ಟೋಪಿಗೆ ಶೀಘ್ರದಲ್ಲೇ ವಿದಾಯ

0
24

ಕರ್ನಾಟಕದ ಪೊಲೀಸರು ಶೀಘ್ರದಲ್ಲೇ ಸಾಂಪ್ರದಾಯಿಕವಾದ ಖಾಕಿ ಟೋಪಿಗಳಿಗೆ ವಿದಾಯ ಹೇಳಲಿದ್ದಾರೆ. ಹಳೆಯ ಖಾಕಿ ಟೋಪಿಗಳಿಗಿಂತ ಎತ್ತರದ ಟೋಪಿಗಳು ಆರಾಮದಾಯಕವಾಗಿರುತ್ತದೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.

ಬೆಂಗಳೂರು: ಕರ್ನಾಟಕದ ಪೊಲೀಸರು ಶೀಘ್ರದಲ್ಲೇ ಸಾಂಪ್ರದಾಯಿಕವಾದ ಖಾಕಿ ಟೋಪಿಗಳಿಗೆ ವಿದಾಯ ಹೇಳಲಿದ್ದಾರೆ. ಹಳೆಯ ಖಾಕಿ ಟೋಪಿಗಳಿಗಿಂತ ಎತ್ತರದ ಟೋಪಿಗಳು ಆರಾಮದಾಯಕವಾಗಿರುತ್ತದೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ. 

ಈಗಾಗ್ಲೇ, ನಗರದ ನೃಪತುಂಗ ರಸ್ತೆಯಲ್ಲಿರುವ ಡಿಜಿ ಹಾಗೂ ಐಜಿಪಿ ಕಚೇರಿಯಲ್ಲಿ ಕೆಲಸ ಮಾಡುವ ಕಾನ್ಸ್‌ಟೇಬಲ್‌ಗಳು ಹೊಸ ಟೋಪಿಗಳನ್ನು ಹಾಕಿಕೊಂಡಿದ್ದಾರೆ. ಹಳೆಯ ಟೋಪಿಗಳ ಬದಲು ಹೊಸ ಎತ್ತರದ ನೀಲಿ ಬಣ್ಣದ ಟೋಪಿಯನ್ನ ಬದಲಾಯಿಸುವ ಬಗ್ಗೆ ಚಿಂತನೆ ನಡೆದಿದೆ. ಹೀಗಾಗಿ, 20 ಪೇದೆಗಳಿಗೆ ಈ ಹೊಸ ಟೋಪಿಯನ್ನು ಹಾಕಿಕೊಳ್ಳಲು ಹೇಳಿದ್ದು, ತಮ್ಮ ಕಚೇರಿಗೆ ಬರುವ ಜನತೆ ಯಾವ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂದು ಸಹ ತಿಳಿದುಕೊಳ್ಳಬೇಕಿದೆ. ನಂತರ, ಮುಂದಿನ ವಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಡಿಜಿ ಐಜಿಪಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಸದ್ಯ, ಬಳಕೆಯಾಗುತ್ತಿರುವ ಖಾಕಿ ಟೋಪಿಗಳನ್ನು 1980 ರಿಂದ 1983ರವರೆಗೆ ಗುಂಡೂರಾವ್ ಸಿಎಂ ಆಗಿದ್ದಾಗ ಪರಿಚಯಿಸಲಾಗಿತ್ತು. ಅದಕ್ಕೂ ಮುನ್ನ ಪೇದೆಗಳು ಕೆಂಪು ಪಟ್ಟಿಗಳುಳ್ಳ ನೀಲಿ ಟೋಪಿಗಳನ್ನು ಹಾಕಿಕೊಳ್ಳುತ್ತಿದ್ದರು. ಅಲ್ಲದೆ, ಕಾನ್ಸ್‌ಟೇಬಲ್‌ಗಳು ಹಾಗೂ ಹೆಡ್‌ ಕಾನ್ಸ್‌ಟೇಬಲ್‌ಗಳು ಚಡ್ಡಿಗಳನ್ನು ಹಾಕಿಕೊಳ್ಳುತ್ತಿದ್ದರು. ಇನ್ನು, ಈ ಹೊಸ ಎತ್ತರದ ಟೋಪಿ ಅತ್ಯಂತ ಆಧುನಿಕ ಹಾಗೂ ವೃತ್ತಿಪರವಾಗಿದ್ದು, ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ವಿಶ್ವಾಸ ನೀಡಲಿದೆ ಎಂದು ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಆದರೆ, ಈ ಬದಲಾವಣೆಗೆ ಕನಿಷ್ಠ ಎರಡು ತಿಂಗಳು ಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ಡಿಜಿ ಹಾಗೂ ಐಜಿಪಿ ನೀಲಮಣಿ ರಾಜು ಈ ಪ್ರಸ್ತಾಪವನ್ನು ಮೊದಲು ರಾಜ್ಯ ಸರಕಾರದ ಬಳಿ ಮಂಡಿಸಬೇಕು. ನಂತರ, ಗೃಹ ಸಚಿವರು ಹಾಗೂ ಉಪ ಮುಖ್ಯಮಂತ್ರಿಯಾಗಿರುವ ಜಿ.ಪರಮೇಶ್ವರ್ ಈ ಬಗ್ಗೆ ಸಿಎಂ ಕುಮಾರಸ್ವಾಮಿಯವರ ಸಲಹೆ ಪಡೆದು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಪೊಲೀಸರ ಯೂನಿಫಾರ್ಮ್ ಜತೆಗೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತನ್ನಿ ಎಂದು ಸ್ವತ: ಪರಮೇಶ್ವರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಹಿಂದೆ ನಿರ್ದೇಶನ ನೀಡಿದ್ದರು ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ. ಪ್ರತಿ ಪೊಲೀಸ್ ಸಿಬ್ಬಂದಿಯೂ ಆಧುನಿಕ ಹಾಗೂ ವೃತ್ತಿಪರವಾಗಿ ಕಾಣಬೇಕು. ಅವರ ಉಡುಪಿನಿಂದ ಪೊಲೀಸರ ಮನೋಭಾವ ಸಹ ಬದಲಾಗಲಿದೆ ಎಂದು ಪರಮೇಶ್ವರ್ ಈ ಹಿಂದೆ ಹೇಳಿದ್ದರು. ನಂತರ, ಕೆಎಸ್‌ಆರ್‌ಪಿಯ ಎಡಿಜಿಪಿ ಭಾಸ್ಕರ್‌ ರಾವ್‌ ನೇತೃತ್ವದ ಸಮಿತಿ ಈ ಬಗ್ಗೆ ವರದಿ ನೀಡಿದೆ. 

ನಂತರ, ಉತ್ತರ ಕರ್ನಾಟಕದ ದೈಹಿಕ ತರಬೇತಿ ಕೇಂದ್ರದ ಕಾನ್ಸ್‌ಟೇಬಲ್‌ ಹಾಗೂ ಹೆಡ್‌ ಕಾನ್ಸ್‌ಟೇಬಲ್‌ಗಳಿಗೆ ಹಳದಿ ಟೀ – ಶರ್ಟ್‌ ಹಾಗೂ ಬಿಳಿಯ ಪ್ಯಾಂಟ್‌ ಯೂನಿಫಾರ್ಮ್‌ ಹಾಕಿಸಿ ಪ್ರಯೋಗ ಮಾಡಲಾಗಿತ್ತು. ಅಲ್ಲದೆ, ಇನ್ಸ್‌ಪೆಕ್ಟರ್‌ ದರ್ಜೆಯ ಅಧಿಕಾರಿಗಳಿಗೆ ಸಭೆಯೊಂದರ ವೇಳೆ ಬಿಳಿಯ ಶರ್ಟ್‌, ನೀಲಿ ಟೈ ಹಾಗೂ ಕಪ್ಪು ಪ್ಯಾಂಟ್‌ ಹಾಕಿಸಿಯೂ ಪ್ರಯೋಗ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಇದೇ ರೀತಿ ಭಾಸ್ಕರ್‌ ರಾವ್‌ ನೇತೃತ್ವದ ಸಮಿತಿ ಸೂಕ್ತ ಬದಲಾವಣೆ ತರಲು ಸಾಧ್ಯಾಸಾಧ್ಯತೆಗಳನ್ನು ನೋಡುತ್ತಿದೆ. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯನ್ನು ಮುಖ್ಯ ಅಧಿಕಾರಿಯನ್ನಾಗಿ ಮಾಡುವುದು ನಮ್ಮ ಕಲ್ಪನೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.