ರಾಜ್ಯಸಭೆ ಚುನಾವಣೆಯಲ್ಲಿ ‘ನೋಟಾ’ಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್‌

0
704

ರಾಜ್ಯಸಭೆ ಚುನಾವಣೆಗಳಲ್ಲಿ ‘ನೋಟಾ’ ಮತಗಳಿಗೆ ಅವಕಾಶ ನೀಡಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದಕ್ಕೆ ಅವಕಾಶ ನೀಡಿದ್ದ ಚುನಾವಣೆ ಆಯೋಗದ ಅಧಿಸೂಚನೆಯನ್ನು ಕೋರ್ಟ್‌ ವಜಾಗೊಳಿಸಿದೆ.

ಹೊಸದಿಲ್ಲಿ: ರಾಜ್ಯಸಭೆ ಚುನಾವಣೆಗಳಲ್ಲಿ ‘ನೋಟಾ’ ಮತಗಳಿಗೆ ಅವಕಾಶ ನೀಡಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದಕ್ಕೆ ಅವಕಾಶ ನೀಡಿದ್ದ ಚುನಾವಣೆ ಆಯೋಗದ ಅಧಿಸೂಚನೆಯನ್ನು ಕೋರ್ಟ್‌ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಜಸ್ಟಿಸ್‌ ಎ.ಎಂ ಖಾನ್ವಿಲ್ಕರ್‌ ಹಾಗೂ ಡಿ.ವೈ ಚಂದ್ರಚೂಡ್‌ ಅವರ ಪೀಠ ಈ ತೀರ್ಪು ನೀಡಿದ್ದು, ಆಯೋಗದ ಅಧಿಸೂಚನೆಯನ್ನು ರದ್ದುಪಡಿಸಿದೆ. 
‘ರಾಜ್ಯಸಭೆ ಚುನಾವಣೆಗಳಲ್ಲಿ ‘ನೋಟಾ’ಗೆ ಅವಕಾಶ ನೀಡುವ ಚುನಾವಣೆ ಆಯೋಗದ ಸೂಚನೆಗೆ ಅನುಮತಿ ನೀಡಲಾಗದು. ಹಾಗೆ ಮಾಡಿದಲ್ಲಿ ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯದ ಅನುಪಾತವನ್ನೇ ನಿರಾಕರಿಸಿದಂತಾಗುತ್ತದೆ’ ಎಂದು ಕೋರ್ಟ್‌ ಹೇಳಿದೆ. 

ಕಳೆದ ಬಾರಿಯ ರಾಜ್ಯಸಭಾ ಚುನಾವಣೆ ಸಂದರ್ಭ ಮತಪತ್ರಗಳಲ್ಲಿ ನೋಟಾ ಮತದಾನಕ್ಕೆ ಅವಕಾಶ ನೀಡಿದ್ದ ಆಯೋಗದ ತೀರ್ಮಾನವನ್ನು ಗುಜರಾತ್‌ ಕಾಂಗ್ರೆಸ್‌ ಮುಖ್ಯ ಸಚೇತಕ ಶೈಲೇಶ್‌ ಪರ್ಮಾರ್‌ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ಮುಗಿಸಿದ ಬಳಿಕ ಕೋರ್ಟ್ ಈ ತೀರ್ಪು ನೀಡಿದೆ. 

ರಾಜ್ಯಸಭಾ ಚುನಾವಣೆಗಳಲ್ಲಿ ನೋಟಾಗೆ ಅವಕಾಶ ನೀಡಿದರೆ ‘ಭ್ರಷ್ಟಾಚಾರ ಮತ್ತು ಕುದುರೆ ವ್ಯಾಪಾರ’ಕ್ಕೆ ಪ್ರೋತ್ಸಾಹಿಸಿದಂತೆ ಎಂದು ಗುಜರಾತ್ ಕಾಂಗ್ರೆಸ್‌ ನಾಯಕ ಆರೋಪಿಸಿದ್ದರು. 

‘ಸಾಂವಿಧಾನಿಕ ಸಂಸ್ಥೆಯೊಂದು ಅಸಾಂವಿಧಾನಿಕ ಕ್ರಮಕ್ಕೆ ಏಕೆ ಮುಂದಾಗಬೇಕು? ಒಬ್ಬ ವ್ಯಕ್ತಿ ಮತದಾನ ಮಾಡದಿದ್ದರೆ ಆತನ ಪಕ್ಷ ಅವನನ್ನು ಉಚ್ಚಾಟಿಸುತ್ತದೆ. ಹಾಗಿದ್ದರೂ ನೋಟಾಗೆ ಅವಕಾಶ ನೀಡುವ ಮೂಲಕ ನೀವು (ಚುನಾವಣೆ ಆಯೋಗ) ಮತ ಹಾಕದಿರುವ ಪ್ರವೃತ್ತಿಗೆ ಅಧಿಕೃತ ಮುದ್ರೆ ನೀಡುತ್ತಿದ್ದೀರಿ’ ಎಂದು ಸುಪ್ರೀಂ ಕೋರ್ಟ್ ಆಕ್ಷೇಪಿಸಿದೆ.