ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆ ಮಿತಿ ಇಳಿಕೆಗೆ “ಚುನಾವಣಾ ಆಯೋಗ” ಆಗ್ರಹ

0
198

ರಾಜಕೀಯ ಪಕ್ಷಗಳಿಗೆ ಬರುವ ಅನಾಮಧೇಯ ದೇಣಿಗೆ ಮಿತಿಯನ್ನು ₹20 ಸಾವಿರದಿಂದ ₹2 ಸಾವಿರಕ್ಕೆ ಇಳಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಆಗ್ರಹಿಸಿದೆ.

ನವದೆಹಲಿ (ಪಿಟಿಐ): ರಾಜಕೀಯ ಪಕ್ಷಗಳಿಗೆ ಬರುವ ಅನಾಮಧೇಯ ದೇಣಿಗೆ ಮಿತಿಯನ್ನು 20 ಸಾವಿರದಿಂದ 2 ಸಾವಿರಕ್ಕೆ ಇಳಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಆಗ್ರಹಿಸಿದೆ. 

ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಸಿ ತಿದ್ದುಪಡಿ ಮಾಡಿ ಅನಾಮಧೇಯ ದೇಣಿಗೆ ಮಿತಿ ಇಳಿಕೆ ಮಾಡುವಂತೆ 2017ರಲ್ಲಿಯೇ ಕೇಂದ್ರ ಸರ್ಕಾರಕ್ಕೆ ಆಯೋಗ ಪತ್ರ ಬರೆದಿತ್ತು. 

ಕಳೆದ ವಾರ ಕಾನೂನು ಸಚಿವಾಲಯದ ಶಾಸಕಾಂಗ ಇಲಾಖೆಗೆ  ಪತ್ರ ಬರೆದಿರುವ ಆಯೋಗ, ‘ಪ್ರತಿ ವ್ಯಕ್ತಿ ನೀಡುವ ದೇಣಿಗೆ ಮಿತಿಯನ್ನು 2 ಸಾವಿರಕ್ಕೆ ನಿಗದಿ ಮಾಡಬೇಕು ಎನ್ನುವ ಬೇಡಿಕೆ ಅಂಗೀಕಾರವಾಗಿದೆ. ಆದರೆ ಅನಾಮಧೇಯ ದೇಣಿಗೆ ಮಿತಿ ಇಳಿಕೆ ಬೇಡಿಕೆ ಮಾತ್ರ ಬಾಕಿ ಉಳಿದಿದೆ’ ಎಂದು ನೆನಪಿಸಿದೆ. 

‘ಒಂದು ರೀತಿ ಪರೋಕ್ಷವಾಗಿ ಅನಾಮಧೇಯ ದೇಣಿಗೆಗೆ ನಿಷೇಧ ಇದೆ. ಏಕೆಂದರೆ 20 ಸಾವಿರದವರೆಗಿನ ದೇಣಿಗೆ ನೀಡಿದವರ ಹೆಸರು ಬಹಿರಂಗಪಡಿಸುವ ಅವಶ್ಯಕತೆ ಇಲ್ಲ. ಇದರಿಂದಾಗಿ ಹಣ ಸ್ವೀಕರಿಸುವ ಸಾಧ್ಯತೆ ಇದೆ. ಇದು ಹಣದ ರೂಪದಲ್ಲಿ 2 ಸಾವಿರಕ್ಕಿಂತ ಹೆಚ್ಚು ದೇಣಿಗೆ ಸ್ವೀಕರಿಸಲು ಹೇರಿರುವ ನಿಷೇಧಕ್ಕೆ  ವಿರೋಧಾಭಾಸವಾಗುತ್ತದೆ’ ಎನ್ನುವುದು ಆಯೋಗದ ನಿಲುವು.