ರಫ್ತು, ರಿಯಾಲ್ಟಿಗೆ ಪ್ಯಾಕೇಜ್ ; ಕೇಂದ್ರ ಸರ್ಕಾರ (ಆರ್ಥಿಕತೆಯ ಚೇತರಿಕೆಗೆ ₹ 70 ಸಾವಿರ ಕೋಟಿ ಕೊಡುಗೆ)

0
12

ಮಂದಗತಿಯ ಆರ್ಥಿಕತೆಗೆ ಉತ್ತೇಜನ ನೀಡುವುದರ ಭಾಗವಾಗಿ ಕೇಂದ್ರ ಸರ್ಕಾರ ರಿಯಲ್‌ ಎಸ್ಟೇಟ್‌, ರಫ್ತು ವಲಯಗಳಿಗೆ ಒಟ್ಟಾರೆ ₹70 ಸಾವಿರ ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಿದೆ.

ನವದೆಹಲಿ (ಪಿಟಿಐ): ಮಂದಗತಿಯ ಆರ್ಥಿಕತೆಗೆ ಉತ್ತೇಜನ ನೀಡುವುದರ ಭಾಗವಾಗಿ ಕೇಂದ್ರ ಸರ್ಕಾರ ರಿಯಲ್‌ ಎಸ್ಟೇಟ್‌, ರಫ್ತು ವಲಯಗಳಿಗೆ ಒಟ್ಟಾರೆ ₹70 ಸಾವಿರ ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮೂರನೇ ಹಂತದ ಆರ್ಥಿಕ ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

‘ಸ್ಥಗಿತಗೊಂಡಿರುವ ಕೈಗೆಟುಕುವ ಮತ್ತು ಮಧ್ಯಮ ಆದಾಯದ ಗೃಹ ಯೋಜನೆಗಳನ್ನು ಪೂರ್ಣಗೊಳಿಸಲು ವಿಶೇಷ ಗವಾಕ್ಷಿ ವ್ಯವಸ್ಥೆಯಲ್ಲಿ ₹ 10 ಸಾವಿರ ಕೋಟಿ ನೀಡಲು ನಿರ್ಧರಿಸಲಾಗಿದೆ. ಇಷ್ಟೇ ಮೊತ್ತವನ್ನು ಹೂಡಿಕೆದಾರರು ನೀಡುವ ನಿರೀಕ್ಷೆ ಇದೆ. ಇದರಿಂದ ಒಟ್ಟಾರೆ ₹ 20 ಸಾವಿರ ಕೋಟಿ ಲಭ್ಯವಾಗಲಿದೆ. ಇದರಿಂದ ಒಟ್ಟಾರೆ 3.5 ಲಕ್ಷ ಮನೆ ಖರೀದಿದಾರರಿಗೆ ಪ್ರಯೋಜನವಾಗುವ ಅಂದಾಜು ಮಾಡಿರುವುದಾಗಿ’ ನಿರ್ಮಲಾ ತಿಳಿಸಿದ್ದಾರೆ.

ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯಡಿ (ಎನ್‌ಸಿಎಲ್‌ಟಿ) ದಿವಾಳಿ ಪ್ರಕ್ರಿಯೆಗೆ ಒಳಗಾಗಿರುವ ಯೋಜನೆಗಳಿಗೆ ಇದು ಅನ್ವಯವಾಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಗೃಹ ಹಣಕಾಸು ಕಂಪನಿಗಳಿಗೆ ವಿದೇಶದಿಂದ ಬಂಡವಾಳ ಸಂಗ್ರಹಿಸಲು ಅನುಕೂಲ ಆಗುವಂತೆ ಬಾಹ್ಯ ವಾಣಿಜ್ಯ ಸಾಲ (ಇಸಿಬಿ) ನಿಯಮದಲ್ಲಿ ಬದಲಾವಣೆ ತರಲಾಗಿದೆ. ಮನೆ ನಿರ್ಮಾಣಕ್ಕೆ ನೀಡುವ ಮುಂಗಡ ಹಣದ ಬಡ್ಡಿದರವನ್ನೂ ಕಡಿಮೆ ಮಾಡಲಾಗುವುದು’ ಎಂದಿದ್ದಾರೆ.
 
ರಫ್ತು ಉತ್ತೇಜನಕ್ಕೆ ಕ್ರಮ: ರಫ್ತು ಉತ್ಪನ್ನಗಳ ಮೇಲಿನ ಸುಂಕ ಅಥವಾ ತೆರಿಗೆ ಕಡಿಮೆ ಮಾಡುವ (ಆರ್‌ಒಡಿಟಿಇಪಿ) ಯೋಜನೆಯು 2020ರ ಜನವರಿಯಿಂದ ಜಾರಿಗೆ ಬರಲಿದೆ. ಇದಕ್ಕೆ ₹ 50 ಸಾವಿರ ಕೋಟಿ ವೆಚ್ಚವಾಗುವ ಅಂದಾಜು ಮಾಡಲಾಗಿದೆ.  ಮರ್ಚಂಡೈಸ್‌ ಎಕ್ಸ್‌ಪೋರ್ಟ್‌ ಇಂಡಿಯಾ ಸ್ಕೀಮ್‌ಗೆ (ಎಂಇಐಎಸ್‌) ಬದಲಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆ.
 
ಆದ್ಯತಾ ವಲಯದ ಸಾಲ (ಪಿಎಸ್‌ಎಲ್‌) ನಿಯಮದಲ್ಲಿ ಬದಲಾವಣೆ ತರಲಾಗಿದ್ದು, ರಫ್ತುದಾರರಿಗೆ ಹೆಚ್ಚುವರಿಯಾಗಿ ₹ 36 ಸಾವಿರದಿಂದ ₹ 68 ಸಾವಿರ ನಿಧಿ ಲಭ್ಯವಾಗಲಿದೆ.