ರಂಜನ್‌ ಗೊಗೊಯಿಗೆ ‘ಸುಪ್ರೀಂ’ ಸಾರಥ್ಯ

0
776

ಸುಪ್ರೀಂ ಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್‌ ಗೊಗೊಯಿ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್‌ ಗೊಗೊಯಿ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಗೊಗೊಯಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ಅಧಿಕಾರ ಸ್ವೀಕರಿಸಿದ ಮೊದಲ ದಿನ ಮಧ್ಯಾಹ್ನ 12 ಗಂಟೆಗೆ ಅವರು ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಮತ್ತು ಕೆ.ಎಂ. ಜೋಸೆಫ್‌ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಳ್ಳಲಿದ್ದಾರೆ.

ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್‌ ಮಿಶ್ರಾ ಅವರು ಅಕ್ಟೋಬರ್ 2ರಂದು ನಿವೃತ್ತರಾಗಿದ್ದಾರೆ.

46ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಅಧಿಕಾರ ಸ್ವೀಕರಿಸಲಿರುವ 64 ವರ್ಷದ ಗೊಗೊಯಿ ಅವರ ಅಧಿಕಾರ ಅವಧಿ 2019ರ ನವೆಂಬರ್‌ 18ಕ್ಕೆ ಕೊನೆಗೊಳ್ಳಲಿದೆ. 

ಮೂಲತಃ ಅಸ್ಸಾಂ ರಾಜ್ಯದ ಗೊಗೊಯಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸುತ್ತಿರುವ ಈಶಾನ್ಯ ರಾಜ್ಯಗಳ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 ಅಸ್ಸಾಂ ಮಾಜಿ ಮುಖ್ಯಮಂತ್ರಿ ಕೇಶವಚಂದ್ರ ಗೊಗೊಯಿ ಅವರ ಪುತ್ರರಾಗಿರುವ ರಂಜನ್‌ ದೆಹಲಿಯ ಪ್ರತಿಷ್ಠಿತ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ.

 ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ರಾಜೀವ್‌ ಗಾಂಧಿ ಹಂತಕರ ಜೀವಾವಧಿ ಶಿಕ್ಷೆ ಮರುಪರಿಶೀಲನಾ ಅರ್ಜಿ, ಲೋಕಪಾಲ ನೇಮಕ ಪ್ರಕರಣಗಳಲ್ಲಿ ರಂಜನ್‌ ಗೊಗೊಯಿ ಅವರು ನಿರ್ಣಾಯಕ ತೀರ್ಪು ನೀಡಿದ್ದಾರೆ.

ಮಿಶ್ರಾಗೆ ವಿದಾಯ: ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ಅಧಿಕಾರ ಅವಧಿ ಮಂಗಳ
ವಾರ ಕೊನೆಗೊಂಡಿದೆ. ಸಹೋದ್ಯೋಗಿ ಹಿರಿಯ ನ್ಯಾಯಮೂರ್ತಿಗಳಿಂದ ಬಂಡಾಯದ ಬಿಸಿ ಎದುರಿಸಿದ್ದ ಮಿಶ್ರಾ ಅವರು ನ್ಯಾಯಾಂಗದ ಒಳಗೆ ಮತ್ತು ಹೊರಗೆ ಟೀಕೆ ಮತ್ತು ಆರೋಪಗಳಿಗೆ ಗುರಿಯಾಗಿದ್ದರು.

2017ರ ಆಗಸ್ಟ್‌ 28ರಂದು ಅಧಿಕಾರ ವಹಿಸಿಕೊಂಡಿದ್ದ ಒಡಿಶಾದ ಮಿಶ್ರಾ ಅವರು ದೇಶದ ನ್ಯಾಯಾಂಗ ಇತಿಹಾಸದಲ್ಲಿ ಮೈಲುಗಲ್ಲಾದ ಅನೇಕ ತೀರ್ಪುಗಳನ್ನು ನೀಡಿದ್ದಾರೆ.

ಆಧಾರ್‌, ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ, ಅನೈತಿಕ ಸಂಬಂಧ ಅಪರಾಧವಲ್ಲ, ಕಾವೇರಿ ನೀರಿನ ಸಮಸ್ಯೆಯಂತಹ ಮಹತ್ವದ ತೀರ್ಪುಗಳನ್ನು ನೀಡಿದ ಪೀಠದಲ್ಲಿ ಅವರು ಇದ್ದರು.