ಯುಪಿಎಸ್‌ಸಿ ಫಲಿತಾಂಶ ಪ್ರಕಟ : ಸಾವಿರದೊಳಗೆ ರ್‍ಯಾಂಕ್‌ ಗಳಿಸಿದ 26 ಕನ್ನಡಿಗರು

0
29

ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ್ದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ರಾಜ್ಯದ 26 ಅಭ್ಯರ್ಥಿಗಳು ವಿವಿಧ ರ್‍ಯಾಂಕ್‌ ಪಡೆದಿದ್ದಾರೆ. ಬೀದರ್‌ನ ರಾಹುಲ್‌ ಶಿಂಧೆ ಅವರು 95ನೇ ರ‍್ಯಾಂಕ್ ಗಳಿಸಿದ್ದಾರೆ.

ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ್ದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ರಾಜ್ಯದ 26 ಅಭ್ಯರ್ಥಿಗಳು ವಿವಿಧ ರ್‍ಯಾಂಕ್‌ ಪಡೆದಿದ್ದಾರೆ. ಬೀದರ್‌ನ ರಾಹುಲ್‌ ಶಿಂಧೆ ಅವರು 95ನೇ ರ‍್ಯಾಂಕ್ ಗಳಿಸಿದ್ದಾರೆ.

ಕೀರ್ತಿ ಕಿರಣ್‌ ಪೂಜಾರ್‌ (115 ರ್‍ಯಾಂಕ್‌), ಟಿ.ಶುಭಮಂಗಳಾ (147), ಎಂ.ಶ್ವೇತಾ (119), ಸಿ. ವಿಂಧ್ಯಾ (160), ಕೃತಿಕಾ (194), ಪೃಥ್ವಿಕ್‌ ಶಂಕರ್‌ (211), ಬಿ.ಗೋಪಾಲಕೃಷ್ಣ (265), ಎಚ್‌.ವಿನೋದ್‌ ಪಾಟೀಲ್‌ (294), ಎಂ.ಪುನೀತ್‌ ಕುಟ್ಟಯ್ಯ (324), ಸಿದ್ದಲಿಂಗ ರೆಡ್ಡಿ (346), ಸುದರ್ಶನ ಭಟ್‌ (434) ಎನ್‌.ವೈ. ವೃಶಾಂಕ್‌ (478), ಅಭಿಲಾಷ್‌ ಶಶಿಕಾಂತ್‌ ಬದ್ದೂರ್‌ (531), ನಿಖಿಲ್‌ ನಿಪ್ಪಾಣಿಕರ್‌ (563), ಟಿ.ಎನ್‌. ನಿಥನ್‌ರಾಜ್‌ (575), ಕೆ. ಸಚಿನ್‌ (652), ಎಸ್‌. ಪ್ರೀತಮ್‌ (654), ಬಿ.ಸಿ. ಹರೀಶ್‌ (657), ಆರ್‌.ವಿಜಯೇಂದ್ರ (666), ಶಿವರಾಜ್‌ ಸಾಯಿಬಣ್ಣ ಮನಗಿರಿ (784), ಸ್ಪರ್ಶ ನೀಲಾಂಗಿ (805), ಆರ್‌.ಸಿ. ಹರ್ಷವರ್ಧನ (913), ವೆಂಕಟೇಶ ನಾಯಕ್‌ (930), ಪಿ.ಪವನ್‌ (933), ಮಹೇಶ (958).
****

95ನೇ ರ‍್ಯಾಂಕ್ ಗಳಿಸಿದ ಐಎಫ್‌ಎಸ್‌ ಅಧಿಕಾರಿ ರಾಹುಲ್‌ ಶಿಂಧೆ

ಬೀದರ್‌: ಇಲ್ಲಿಯ ಗುರುನಾನಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಓದಿದ ರಾಹುಲ್‌ ಶಿಂಧೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ 95ನೇ ರ‍್ಯಾಂಕ್ ಜತೆಗೆ ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಕಳೆದ ವರ್ಷ ಇಂಡಿಯನ್‌ ಫಾರೆಸ್ಟ್‌ ಸರ್ವಿಸ್‌ ಪರೀಕ್ಷೆಯಲ್ಲಿ 59 ರ‍್ಯಾಂಕ್ ಪಡೆದುಕೊಂಡಿದ್ದು, ಸದ್ಯ ಡೆಹರಾಡೂನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬೀದರ್‌ನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ ನಂತರ ಹೈದರಾಬಾದ್‌ನ ಸಿಟ್ಜಿ ಕಾಲೇಜಿನಲ್ಲಿ 12ನೇ ತರಗತಿ ಪಾಸಾಗಿ ಮುಂಬೈನ ಐಐಟಿಯಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ.

ದೆಹಲಿಯಲ್ಲಿ ತರಬೇತಿ ಪಡೆದಿರುವ ರಾಹುಲ್‌ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿದ್ದಾರೆ. ಶಿಂಧೆ ಅವರ ತಂದೆಗೆ ಒಟ್ಟು ನಾಲ್ಕು ಮಕ್ಕಳು ಇದ್ದಾರೆ. ಅವರಲ್ಲಿ ಮೂವರು ಹೆಣ್ಣು ಮಕ್ಕಳು.

ದೆಹಲಿಯಲ್ಲಿ ವೈದ್ಯೆಯಾಗಿರುವ ಸಹೋದರಿ ರೂಪಾ ಅವರ ಮನೆಯಲ್ಲಿ ಉಳಿದುಕೊಂಡು ಯುಪಿಎಸ್‌ ಪರೀಕ್ಷೆ ತಯಾರಿ ನಡೆಸಿದ್ದರು. ತಂದೆ ಬೀದರ್‌ನಲ್ಲಿ ಜಿಲ್ಲಾ ಸಾಕ್ಷರತಾ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಇನ್ನಿಬ್ಬರು ಸಹೋದರಿಯರು ಎಂಜಿನಿಯರಿಂಗ್ ಹಾಗೂ ಎಂ.ಟೆಕ್‌ ಪದವಿ ಪಡೆದಿದ್ದಾರೆ.

‘ರಾಷ್ಟ್ರಮಟ್ಟದಲ್ಲಿ 95ನೇ ರ‍್ಯಾಂಕ್ ಬಂದಿರುವುದು ಗೊತ್ತಾಗಿದೆ. ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ಮಾಹಿತಿ ಇಲ್ಲ. ರ‍್ಯಾಂಕ್ ಬಂದಿರುವುದು ಖುಷಿ ತಂದಿದೆ’ ಎಂದು ರಾಹುಲ್‌ ಶಿಂಧೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
****