ಮ್ಯೂಚುವಲ್ ಫಂಡ್‌ಗಳ ಸೇವಾ ಶುಲ್ಕಕ್ಕೆ ಜಿಎಸ್‌ಟಿ

0
16

ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಉಚಿತವಾಗಿ ಒದಗಿಸುವ ಚೆಕ್‌ಬುಕ್‌ ವಿತರಣೆ, ಎಟಿಎಂ ಸೇವೆಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯಿಸುವುದಿಲ್ಲ ಎಂದು ರೆವಿನ್ಯೂ ಇಲಾಖೆ ಸ್ಪಷ್ಟಪಡಿಸಿದೆ.

ನವದೆಹಲಿ  ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಉಚಿತವಾಗಿ ಒದಗಿಸುವ ಚೆಕ್‌ಬುಕ್‌ ವಿತರಣೆ, ಎಟಿಎಂ ಸೇವೆಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯಿಸುವುದಿಲ್ಲ ಎಂದು ರೆವಿನ್ಯೂ ಇಲಾಖೆ ಸ್ಪಷ್ಟಪಡಿಸಿದೆ.

ಕ್ರೆಡಿಟ್‌ ಕಾರ್ಡ್‌ನ ಹಣವನ್ನು ತಡವಾಗಿ ಪಾವತಿಸುವ ಮೊತ್ತಕ್ಕೆ ಮತ್ತು ಅನಿವಾಸಿ ಭಾರತೀಯರು ಖರೀದಿಸುವ ವಿಮೆ ಯೋಜನೆಗಳು ಹಾಗೂ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹಣ ತೊಡಗಿಸಿದವರು ಯೋಜನೆಯೊಂದರಿಂದ ಹೊರ ನಡೆಯುವಾಗ ವಸೂಲಿ ಮಾಡುವ ಸೇವಾ ಶುಲ್ಕಕ್ಕೆ (ಎಕ್ಸಿಟ್‌ ಲೋಡ್‌) ಜಿಎಸ್‌ಟಿ ಅನ್ವಯವಾಗಲಿದೆ.

‘ಎಕ್ಸಿಟ್‌ ಲೋಡ್‌’, ಹೂಡಿಕೆಯ ನಿರ್ದಿಷ್ಟ ಶೇಕಡಾವಾರು ಸ್ವರೂಪದಲ್ಲಿ ಇರುವುದರ ಬದಲಿಗೆ ಶುಲ್ಕದ ರೂಪದಲ್ಲಿ ಇರುವುದರಿಂದ  ಜಿಎಸ್‌ಟಿ ವ್ಯಾಪ್ತಿಗೆ ಬರಲಿದೆ.

ಬ್ಯಾಂಕಿಂಗ್‌, ವಿಮೆ ಮತ್ತು ಷೇರು ವಹಿವಾಟಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಕುರಿತ ಪ್ರಶ್ನೆಗಳಿಗೆ ರೆವಿನ್ಯೂ ಇಲಾಖೆ ನೀಡಿದ ಉತ್ತರದಲ್ಲಿ  ಗೊಂದಲಗಳನ್ನು ನಿವಾರಿಸಲಾಗಿದೆ.

ಬ್ಯಾಂಕ್‌ಗಳ ಉಚಿತ ಸೇವೆಗಳಿಗೆ ಜಿಎಸ್‌ಟಿ ಅನ್ವಯವಾಗುವುದೇ ಎನ್ನುವ ಅನುಮಾನಗಳಿಗೆ ಈಗ ತೆರೆ ಬಿದ್ದಿದೆ.

ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಒದಗಿಸುವ ಉಚಿತ ಸೇವೆಗಳಿಗೆ ಸೇವಾ ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆಯು ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು.

ಷೇರುಗಳ ವಾಯಿದಾ ವಹಿವಾಟಿಗೂ ಜಿಎಸ್‌ಟಿ ವಿನಾಯ್ತಿ ಅನ್ವಯಿಸಲಿದೆ. ಜೀವ ವಿಮೆ ಸೇವೆಗಳನ್ನು ಅಂತರರಾಜ್ಯ ಪೂರೈಕೆ ಎಂದು ಪರಿಗಣಿಸುವುದರಿಂದ ಜಿಎಸ್‌ಟಿ ಅನ್ವಯಗೊಳ್ಳಲಿದೆ.

ಕ್ರೆಡಿಟ್‌ ಕಾರ್ಡ್‌ನ ಬಾಕಿ ಇರುವ ಮೊತ್ತ ಮತ್ತು ಸಂಪತ್ತನ್ನು ಅಡಮಾನ ಇಟ್ಟು ಪಡೆಯುವ ಸಾಲದ ಬಡ್ಡಿಯು ಜಿಎಸ್‌ಟಿ ವ್ಯಾಪ್ತಿಗೆ ಬರಲಿದೆ.

ಎನ್‌ಆರ್‌ಐಗಳಿಗೆ: ಅನಿವಾಸಿ ಭಾರತೀಯರು ವಿಮೆ ಯೋಜನೆಗಳನ್ನು ಖರೀದಿಸುವಾಗ ಅನಿವಾಸಿ ಭಾರತೀಯರ ಬಾಹ್ಯ ಖಾತೆಯಿಂದ ಪರಿವರ್ತಿಸಲಾದ ವಿದೇಶಿ ವಿನಿಮಯದ ಬದಲಿಗೆ ರೂಪಾಯಿ ರೂಪದಲ್ಲಿ ಹಣ ಪಾವತಿಸಬೇಕು.