ಮ್ಯಾನ್ಮಾರ್‌ ಅಧ್ಯಕ್ಷರಾಗಿ ವಿನ್‌ ಮಿಂಟ್‌ ಆಯ್ಕೆ

0
22

ಮ್ಯಾನ್ಮಾರ್‌ನ ನೂತನ ಅಧ್ಯಕ್ಷರಾಗಿ ಆಂಗ್‌ ಸಾನ್‌ ಸೂಕಿ ಅವರ ಆಪ್ತ ವಿನ್‌ ಮಿಂಟ್‌ ಅವರು ಆಯ್ಕೆಯಾಗಿದ್ದಾರೆ. ಇದರಿಂದಾಗಿ, ಉನ್ನತ ಮಟ್ಟದ ನಿರ್ಧಾರಗಳ ಮೇಲೆ ಹಿಡಿತ ಸಾಧಿಸಲು ಸೂಕಿ ಅವರಿಗೆ ಸಾಧ್ಯವಾಗಲಿದೆ.

ವಿನ್‌ ಮಿಂಟ್‌ ಅವರು ಇದಕ್ಕೂ ಮುನ್ನ ಸ್ಪೀಕರ್‌ ಆಗಿದ್ದರು. ರೋಹಿಂಗ್ಯಾ ಮುಸ್ಲಿಂ ಸಮುದಾಯದವರ ಬಿಕ್ಕಟ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ತಾರಕಕ್ಕೇರಿರುವಂತೆಯೇ, ಮ್ಯಾನ್ಮಾರ್ ಅಧ್ಯಕ್ಷರಾಗಿದ್ದ ಹಟಿನ್ ಕ್ಯಾವ್ ಕಳೆದ ವಾರ ದಿಢೀರನೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನವು ತೆರವಾಗಿತ್ತು. ಸಂಸತ್ತಿನಲ್ಲಿ ಮೂರನೇ ಎರಡು ಭಾಗದಷ್ಟು ಮತ ಪಡೆಯುವ ಮೂಲಕ ವಿನ್‌ ಮಿಂಟ್‌ ಆಯ್ಕೆ ಆಗಿದ್ದಾರೆ.

ಸೂಕಿ ವಿದೇಶಿಯೊಬ್ಬರನ್ನು ಮದುವೆಯಾಗಿದ್ದು, ಮಕ್ಕಳಿಬ್ಬರೂ ಬ್ರಿಟಿಷ್‌ ಪ್ರಜೆಗಳಾಗಿರುವ ಕಾರಣ, ಅಧ್ಯಕ್ಷ ಹುದ್ದೆಯಿಂದ ಸೇನಾ‍ ಕರಡು ಸಂವಿಧಾನ ನಿಷೇಧಿಸಿತ್ತು.  2015ರ ಚುನಾವಣೆಯಲ್ಲಿ ಇವರ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಬಹುಮತಗಳಿಸಿದ ಕಾರಣ, ಕೌನ್ಸೆಲರ್‌ ಆಗಿ ನೇಮಕಗೊಂಡರು. ಆದರೆ ಈ ಹುದ್ದೆಗೆ ಸಾಂವಿಧಾನಿಕ ಮಾನ್ಯತೆ ಇರಲಿಲ್ಲ. ಅವರ ಶಾಲಾ ಸ್ನೇಹಿತರೂ ಆಗಿರುವ ಹಟಿನ್ ಕ್ಯಾವ್, ಸೂಕಿಯವರ ಪ್ರತಿನಿಧಿಯಾಗಿ ಅಧ್ಯಕ್ಷ ಹುದ್ದೆಯಲ್ಲಿದ್ದರು.