ಮೊಬೈಲ್ ಬಿಡಿಭಾಗ ಸುಂಕ ರದ್ದು : ಕೇಂದ್ರ ಸರ್ಕಾರ

0
420

ಮೊಬೈಲ್ ಮತ್ತು ಸ್ಮಾರ್ಟ್‌ಫೋನ್ ತಯಾರಿಕೆ ಯಲ್ಲಿ ಬಳಸುವ 35 ವಿಧದ ಬಿಡಿ ಭಾಗಗಳ ಮೇಲಿನ ಆಮದು ಸುಂಕ ವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.

ನವದೆಹಲಿ (ಪಿಟಿಐ): ಮೊಬೈಲ್ ಮತ್ತು ಸ್ಮಾರ್ಟ್‌ಫೋನ್ ತಯಾರಿಕೆ ಯಲ್ಲಿ ಬಳಸುವ 35 ವಿಧದ ಬಿಡಿ ಭಾಗಗಳ ಮೇಲಿನ ಆಮದು ಸುಂಕ ವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.

ದೇಶದಲ್ಲಿ ಮೊಬೈಲ್ ತಯಾರಿಕೆ ಉದ್ದಿಮೆಯನ್ನು ಉತ್ತೇಜಿಸುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಈ ಸಂಬಂಧ ಸೆ.28ರಂದು ಅಧಿಸೂಚನೆ ಹೊರಡಿಸಿದೆ.

ಮೊಬೈಲ್ ತಯಾರಿಕೆಯಲ್ಲಿ ಬಳಸುವ ‍ಪ್ರಿಂಟೆಡ್ ಸರ್ಕಿಟ್ ಬೋರ್ಡ್ (ಪಿಸಿಬಿ– ಮದರ್ ಬೋರ್ಡ್), ಪಿಸಿಬಿಯ ಬಿಡಿ ಭಾಗಗಳು, ಪಿಸಿಬಿ ಮುದ್ರಣ ಯಂತ್ರಗಳು, ಲಿಥಿಯಂ ಅಯಾನ್ ಬ್ಯಾಟರಿ, ಸ್ಪೀಕರ್, ಸಂಕೇತ ಗ್ರಾಹಕಗಳು (ರಿಸೀವರ್), ಫೈಬರ್ ಆಪ್ಟಿಕಲ್ ಕೇಬಲ್, ಡಾಟಾ ಕೇಬಲ್‌ಗಳು ಹಾಗೂ ಇನ್ನೂ ಹಲವು ಬಿಡಿಭಾಗಗಳಿಗೆ ಆಮದು ಸುಂಕದಿಂದ ವಿನಾಯಿತಿ ದೊರೆತಿದೆ.

‘ಸರ್ಕಾರದ ಈ ಕ್ರಮವನ್ನು ಸ್ವಾಗತಿಸುತ್ತೇವೆ. ಈ ಬಿಡಿಭಾಗಗಳ ಮೇಲೆ ಶೇ 7.5ರಿಂದ ಶೇ 10ರಷ್ಟು ಆಮದು ಸುಂಕ ವಿಧಿಸಲಾಗುತ್ತಿತ್ತು. ಇದರಿಂದ ಉದ್ದಿಮೆಯ ಬೆಳವಣಿಗೆಗೆ ಸಹಾಯವಾಗಲಿದೆ’ ಎಂದು ಭಾರತೀಯ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಹೇಳಿದೆ.