ಮೊಬೈಲ್‌ ವಾಲೆಟ್‌: ಆರ್‌ಬಿಐ ಹೊಸ ನಿಯಮ

0
550

ಮೊಬೈಲ್‌ ವಾಲೆಟ್‌ನಲ್ಲಿ ಒಂದು ವೇಳೆ ಹಣ ಕಳೆದುಕೊಂಡರೆ ಗ್ರಾಹಕರಿಗೆ ಸೂಕ್ತ ಪರಿಹಾರ ಒದಗಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೊಸ ನಿಯಮಾವಳಿಗಳನ್ನು ರೂಪಿಸಿದೆ.

ಬೆಂಗಳೂರು: ಮೊಬೈಲ್‌ ವಾಲೆಟ್‌ನಲ್ಲಿ ಒಂದು ವೇಳೆ ಹಣ ಕಳೆದುಕೊಂಡರೆ ಗ್ರಾಹಕರಿಗೆ ಸೂಕ್ತ ಪರಿಹಾರ ಒದಗಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೊಸ ನಿಯಮಾವಳಿಗಳನ್ನು ರೂಪಿಸಿದೆ.

ಇನ್ನು ಮುಂದೆ ಮೊಬೈಲ್‌ ವಹಿವಾಟಿನ ಮೂಲಕ ಹಣ ಕಳೆದುಕೊಂಡರೆ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಬಳಕೆದಾರರಿಗೆ ನೀಡಲಾಗುತ್ತಿರುವ ಸುರಕ್ಷತೆಯನ್ನು ಮೊಬೈಲ್‌ ವಾಲೆಟ್‌ ಬಳಕೆದಾರರಿಗೂ ನೀಡಲು ಅನೇಕ ನಿಯಮಗಳನ್ನು ರೂಪಿಸಿದೆ.

ವಾಲೆಟ್‌ ಮೂಲಕ ನಡೆಸಿದ ವಹಿವಾಟಿನ ಬಗ್ಗೆ ಗ್ರಾಹಕರಿಗೆ ತಕ್ಷಣ ಸಂದೇಶ ಬರುತ್ತದೆ. ಹೀಗೆ ಬರುವ ಸಂದೇಶದಲ್ಲಿ ವಾಲೆಟ್‌ ಸಂಸ್ಥೆಯ ಸಂಪರ್ಕ ಸಂಖ್ಯೆ ಅಥವಾ ಇ–ಮೇಲ್‌ ಮಾಹಿತಿ ನೀಡುವುದು ಕಡ್ಡಾಯ. ಒಂದು ವೇಳೆ ವಂಚನೆ ನಡೆದರೆ ಗ್ರಾಹಕರು ಸುಲಭವಾಗಿ ಸಂಸ್ಥೆಯನ್ನು ಸಂಪರ್ಕಿಸಲು ಇದು ನೆರವಾಗುತ್ತದೆ.

 ಬಳಕೆದಾರರು ವಹಿವಾಟಿನ ಬಗ್ಗೆ ಎಸ್‌ಎಂಎಸ್‌, ಇ–ಮೇಲ್‌ ಹೀಗೆ ಯಾವುದಾದರೂ ರೂಪದಲ್ಲಿ ಸೂಚನೆ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆಯೇ ಎನ್ನುವುದನ್ನು ವಾಲೆಟ್‌ ಸಂಸ್ಥೆಯು ಖಾತರಿ ಪಡಿಸಿಕೊಳ್ಳಬೇಕು. ವಂಚನೆ ನಡೆದರೆ ತಕ್ಷಣ ದೂರು ದಾಖಲಿಸಲು ಇದು ನೆರವಾಗಲಿದೆ. 

ಗ್ರಾಹಕರು ಯಾವುದೇ ರೀತಿಯ ದೂರುಗಳನ್ನು ದಾಖಲಿಸಲು ನೆರವಾಗಲು ಎಲ್ಲಾ ವಾಲೆಟ್‌ ಸಂಸ್ಥೆಗಳು ದಿನದ 24 ಗಂಟೆ ಕಾರ್ಯನಿರ್ವಹಿಸುವ ಗ್ರಾಹಕ ಸೇವಾ ಸಹಾಯವಾಣಿ ಹೊಂದಿರಬೇಕು.

ಕಂಪನಿಯ ನಿರ್ಲಕ್ಷ್ಯ ಅಥವಾ ಆ್ಯಪ್‌ ನ್ಯೂನತೆಯಿಂದ ಗ್ರಾಹಕರು ಹಣ ಕಳೆದುಕೊಂಡರೆ, ಈ ಬಗ್ಗೆ ದೂರು ದಾಖಲಾದ 3 ದಿನಗಳಲ್ಲಿ ಸಂಸ್ಥೆಯು ಹಣವನ್ನು ಮರುಪಾವತಿಸಬೇಕು. ಒಂದು ವೇಳೆ ಬಳಕೆದಾರ ಈ ಬಗ್ಗೆ ದೂರು ನೀಡದಿದ್ದರೂ ಕಂಪನಿಯೇ ಹಣ ಮರುಪಾವತಿಸಲು ಕ್ರಮಕೈಗೊಳ್ಳಬೇಕು.

ಹಣ ಕಳೆದುಕೊಂಡ ಬಗ್ಗೆ 4 ರಿಂದ 7 ದಿನಗಳಲ್ಲಿ ದೂರು ನೀಡಿದರೆ, ವಹಿವಾಟಿನ ಹಣ ಅಥವಾ 10,000 ಇದರಲ್ಲಿ ಯಾವುದು ಸಣ್ಣ ಮೊತ್ತವೊ ಅದನ್ನು ಕಂಪನಿ ಗ್ರಾಹಕರಿಗೆ ಮರುಪಾವತಿಸಬೇಕು. ಒಂದು ವೇಳೆ ವಂಚನೆ ನಡೆದು 7 ದಿನಗಳ ನಂತರ ದೂರು ನೀಡಿದರೆ ಕಂಪನಿಯ ನಿಯಮದ (ಆರ್‌ಬಿಐ ಅನುಮೋದಿಸಿದ) ಪ್ರಕಾರ ಹಣ ಮರುಪಾವತಿ ಮಾಡಲಾಗುತ್ತದೆ.  

ದೂರು ನೀಡಿದ 10 ದಿನಗಳಲ್ಲಿ ಕಂಪನಿಯು ಹಣ ಮರುಪಾವತಿ ಬಗ್ಗೆ ಕ್ರಮಕೈಗೊಳ್ಳಬೇಕು. ಗ್ರಾಹಕರಿಂದ ದಾಖಲಾದ ದೂರನ್ನು ಗರಿಷ್ಠ 90 ದಿನಗಳಲ್ಲಿ ಪರಿಹರಿಸಬೇಕು. ಇಲ್ಲದಿದ್ದರೆ ವಂಚನೆಯಾದ ಪೂರ್ತಿ ಹಣವನ್ನು ಸಂಸ್ಥೆ ಮರುಪಾವತಿಸಬೇಕು. 

ಕೆವೈಸಿ ಪ್ರಕ್ರಿಯೆ: ಮೊಬೈಲ್ ವಾಲೆಟ್ ಕಂಪನಿಗಳು ಫೆಬ್ರವರಿ 28ರ ಒಳಗಾಗಿ ‘ತಿಳಿಯಿರಿ ನಿಮ್ಮ ಗ್ರಾಹಕರು (ಕೆವೈಸಿ)’  ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಬಹುತೇಕ ಹೆಚ್ಚಿನ ಕಂಪನಿಗಳು ಇದುವರೆಗೂ ‘ಕೆವೈಸಿ’ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಈ ಪ್ರಕ್ರಿಯೆ ಪೂರ್ಣವಾಗದೆ ಹೋದರೆ ಮಾರ್ಚ್ 1ರಿಂದ ಮೊಬೈಲ್ ವಾಲೆಟ್‌ಗಳ ಕಾರ್ಯನಿರ್ವಹಣೆಗೆ ಧಕ್ಕೆ ಒದಗಲಿದೆ. ಗ್ರಾಹಕರೂ ಸಹ ‘ಕೆವೈಸಿ’ ಮಾಡಿಕೊಳ್ಳದಿದ್ದರೆ ವಾಲೆಟ್ ಬಳಕೆ ಸಾಧ್ಯವಾಗುವುದಿಲ್ಲ.