ಮೊಬೈಲ್‌-ಆಧಾರ್‌ ಲಿಂಕ್‌ ಕಡ್ಡಾಯ: 2018 ಫೆಬ್ರುವರಿ ಕೊನೆ

0
27

ಆಧಾರ್ ಜತೆ ಲಿಂಕ್ ಮಾಡದ ಸಿಮ್‌ ಕಾರ್ಡ್‌ಗಳನ್ನು 2018ರ ಫೆಬ್ರುವರಿ ಬಳಿಕ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಮೊಬೈಲ್‌ ಸಿಮ್‌ ಕಾರ್ಡ್‌ ಗಳನ್ನು ಆಧಾರ್‌ ಸಂಖ್ಯೆಯೊಂದಿಗೆ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ.

ಒಂದು ವೇಳೆ ಇದನ್ನು ಲಿಂಕ್‌ ಮಾಡದಿದ್ದರೆ ಫೆಬ್ರವರಿ 2018ರ ನಂತರ ಸಿಮ್‌ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ. ಅಂದರೆ ಡೀ ಆಕ್ಟಿವೇಟ್‌ ಆಗಲಿವೆ. ಮುಂದಿನ ಫೆಬ್ರವರಿ ತಿಂಗಳ ವೇಳೆಗೆ ಲಿಂಕ್‌ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಮೊಬೈಲ್‌ ಸಿಮ್‌ ಜತೆ ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡಿಕೊಳ್ಳುವುದು ಕಡ್ಡಾಯ ಎಂದು ಕಳೆದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು.

ಲಿಂಕ್ ಮಾಡಲು ಕಾರಣ?

ಲೋಕನೀತಿ ಫೌಂಡೇಶನ್ ಪ್ರಕರಣಕ್ಕೆ ಸಂಬಂಧಿಸಿ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಆಧಾರದಲ್ಲಿ ಸಿಮ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ನೀಡಿದ ಒಂದು ವರ್ಷದ ಒಳಗಾಗಿ ಎಲ್ಲ ಸಿಮ್‌ ಕಾರ್ಡ್‌ಗಳನ್ನು ಆಧಾರ್ ಜತೆ ಲಿಂಕ್ ಮಾಡಬೇಕಿದೆ. ಅಪರಾಧಿಗಳು, ಭಯೋತ್ಪಾದಕರು ಸಿಮ್‌ ಕಾರ್ಡ್‌ಗಳನ್ನು ಬಳಸುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.

ಮೂಲಗಳ ಪ್ರಕಾರ, ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ಮೊಬೈಲ್ ಆಪರೇಟರ್‌ಗಳು ಸಂಗ್ರಹಿಸುವಂತಿಲ್ಲ. ಮಾಹಿತಿಗಳು ಗೂಢ ಲಿಪಿಯಲ್ಲಿರಲಿದ್ದು, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿಡುವುದು 2016ರ ಆಧಾರ್ ಕಾಯ್ದೆಯ ಅನ್ವಯ ಶಿಕ್ಷಾರ್ಹ ಅಪರಾಧವಾಗಿದ್ದು, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.