ಮೈಸೂರು ದಸರಾ ಕ್ರೀಡಾಕೂಟದ ಬಹುಮಾನ ಮೊತ್ತದಲ್ಲಿ ಹೆಚ್ಚಳ

0
446

ಕ್ರೀಡಾಪಟುಗಳು, ಕೋಚ್‌ಗಳು ಹಾಗೂ ಕ್ರೀಡಾ ಪ್ರೇಮಿಗಳ ಒತ್ತಾಸೆಯಿಂದಾಗಿ ದಸರಾ ಕ್ರೀಡಾಕೂಟದ ಬಹುಮಾನ ಮೊತ್ತದಲ್ಲಿ ಈ ಬಾರಿ ಹೆಚ್ಚಳ ಮಾಡಲಾಗಿದೆ.ಸಾಂಸ್ಕೃತಿಕ ನಗರದಲ್ಲಿ ಬುಧವಾರ ಆರಂಭವಾಗಲಿರುವ ‘ದಸರಾ ಸಿ.ಎಂ ಕಪ್‌’ ಕ್ರೀಡಾಕೂಟದಿಂದಲೇ ಇದು ಜಾರಿಗೆ ಬರಲಿದೆ.

ಮೈಸೂರು: ಕ್ರೀಡಾಪಟುಗಳು, ಕೋಚ್‌ಗಳು ಹಾಗೂ ಕ್ರೀಡಾ ಪ್ರೇಮಿಗಳ ಒತ್ತಾಸೆಯಿಂದಾಗಿ ದಸರಾ ಕ್ರೀಡಾಕೂಟದ ಬಹುಮಾನ ಮೊತ್ತದಲ್ಲಿ ಈ ಬಾರಿ ಹೆಚ್ಚಳ ಮಾಡಲಾಗಿದೆ.

ಸಾಂಸ್ಕೃತಿಕ ನಗರದಲ್ಲಿ ಬುಧವಾರ ಆರಂಭವಾಗಲಿರುವ ‘ದಸರಾ ಸಿ.ಎಂ ಕಪ್‌’ ಕ್ರೀಡಾಕೂಟದಿಂದಲೇ ಇದು ಜಾರಿಗೆ ಬರಲಿದೆ.

‘ವೈಯಕ್ತಿಕ ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ಗೆದ್ದವರಿಗೆ  12,000 (ಚಿನ್ನ),  6,000 (ಬೆಳ್ಳಿ),  3,000 (ಕಂಚು) ಬಹುಮಾನ ನೀಡಲು ನಿರ್ಧರಿಸಲಾಗಿದೆ’ ಎಂದು ಕ್ರೀಡಾ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಈ ಹಿಂದೆ ಕ್ರಮವಾಗಿ 5,0003,000,  1,500 ನೀಡಲಾಗುತಿತ್ತು.

ಗುಂಪು ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ಗೆದ್ದ ತಂಡಗಳಿಗೆ  40,000 (ಚಿನ್ನ),  20,000 (ಬೆಳ್ಳಿ),  10,000 (ಕಂಚು) ಬಹುಮಾನ ಲಭಿಸಲಿದೆ.

ಅಕ್ಟೋಬರ್.10ರಿಂದ 16ರವರೆಗೆ ಅಥ್ಲೆಟಿಕ್ಸ್‌ ಸೇರಿದಂತೆ 31 ಕ್ರೀಡಾ ವಿಭಾಗಗಳಲ್ಲಿ ಸುಮಾರು 4,500 ಸ್ಪರ್ಧಿ
ಗಳು ಪೈಪೋಟಿ ನಡೆಸಲಿದ್ದಾರೆ. ಸ್ಥಳೀಯ ಕ್ರೀಡಾಸಕ್ತರ ಒತ್ತಡದಿಂದಾಗಿ ಬಾಲ್‌ಬ್ಯಾಡ್ಮಿಂಟನ್‌, ಚೆಸ್‌, ಕರಾಟೆ, ಥ್ರೋಬಾಲ್‌, ಹಾಫ್‌ ಮ್ಯಾರಥಾನ್‌, ಸೈಕಲ್‌ ಪೋಲೊ, ದೇಹದಾರ್ಢ್ಯ ಸ್ಪರ್ಧೆಗಳಿಗೆ ಕೊನೆ ಸಮಯದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದೇ ಮೊದಲ ಬಾರಿ ಕ್ರೀಡಾಪಟುಗಳ ವಾಸ್ತವ್ಯಕ್ಕೆ ಹೋಟೆಲ್‌ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ 24 ಹೋಟೆಲ್‌ಗಳನ್ನು ಗುರುತಿಸಲಾಗಿದೆ. ಕ್ರೀಡಾ ಸಮವಸ್ತ್ರ, ಷೂ ಹಾಗೂ ಆಹಾರವನ್ನು ಉಚಿತವಾಗಿ ಕಲ್ಪಿಸಲಾಗುತ್ತಿದೆ. ಈ ಹಿಂದೆ ಚೌಲ್ಟ್ರಿ, ಹಾಸ್ಟೆಲ್‌, ಶಾಲಾ ಕಾಲೇಜುಗಳ ಕೊಠಡಿಗಳಲ್ಲಿ ಉಳಿದುಕೊಳ್ಳುತ್ತಿದ್ದರು.

ಕ್ರೀಡಾಕೂಟವನ್ನು ಈ ಬಾರಿ ‘ದಸರಾ ಸಿ.ಎಂ ಕಪ್‌’ ಎಂಬುದಾಗಿ ನಾಮಕರಣ ಮಾಡಲಾಗಿದೆ. ಈ ಮೂಲಕ ಪ್ರಮಾಣಪತ್ರಕ್ಕೆ ಮಾನ್ಯತೆ ಕಲ್ಪಿಸಲಾಗಿದೆ. ಪ್ರತಿ ಕ್ರೀಡಾ ವಿಭಾಗದಿಂದ ಅಗ್ರ ಎಂಟು ತಂಡಗಳು ಪೈಪೋಟಿ ನಡೆಸಲಿವೆ. ‘ಕ್ರೀಡಾಕೂಟದ ಸ್ವರೂಪ ಬದಲಿಸಿರುವುದರಿಂದ ಈ ಬಾರಿ ದಸರೆಯಲ್ಲಿ ಭಾಗವಹಿಸಲು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಲಭಿಸಿಲ್ಲ’ ಎಂಬ ಆಕ್ರೋಶವೂ ಸ್ಥಳೀಯ ಕ್ರೀಡಾಪಟುಗಳು, ಕ್ರೀಡಾ ಪೋಷಕರಿಂದ ವ್ಯಕ್ತವಾಗಿದೆ.