ಮೈಸೂರು ಜಿಲ್ಲೆಯಲ್ಲಿ ಲಿಂಗಾನುಪಾತ ಕುಸಿತ :ಎಚ್‌ಎಂಐಎಸ್ ವರದಿಯಲ್ಲಿ ಬಹಿರಂಗ

0
167

ಸತತ ನಾಲ್ಕನೇ ವರ್ಷವೂ ಮೈಸೂರು ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ಕುಸಿತ ಕಂಡಿದೆ ಎಂದು ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್‌ಎಂಐಎಸ್) ವರದಿಯಿಂದ ತಿಳಿದುಬಂದಿದೆ.

ಮೈಸೂರು: ಸತತ ನಾಲ್ಕನೇ ವರ್ಷವೂ ಮೈಸೂರು ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ಕುಸಿತ ಕಂಡಿದೆ ಎಂದು ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್‌ಎಂಐಎಸ್) ವರದಿಯಿಂದ ತಿಳಿದುಬಂದಿದೆ.

2018ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಮೈಸೂರು ಜಿಲ್ಲೆಯಲ್ಲಿ 1000 ಗಂಡು ಮಕ್ಕಳಿಗೆ ಹೆಣ್ಣುಮಕ್ಕಳ ಜನನ ಪ್ರಮಾಣ ಕೇವಲ 919 ಆಗಿದೆ. 2017–18ರ ಅವಧಿಯಲ್ಲಿ ಹೆಣ್ಣುಮಕ್ಕಳ ಜನನ ಪ್ರಮಾಣ 941 ಇತ್ತು.

ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಹೆಣ್ಣುಮಕ್ಕಳ ಜನನ ಪ್ರಮಾಣ ಕುಸಿಯುತ್ತಲೇ ಇರುವುದನ್ನು ವರದಿ ತೋರಿಸಿದೆ. 2014–15 ರಲ್ಲಿ 961 ಇದ್ದ ಹೆಣ್ಣುಮಕ್ಕಳ ಜನನ ಪ್ರಮಾಣ 2015–16 ರಲ್ಲಿ 952ಕ್ಕೆ ಇಳಿಕೆಯಾಗಿತ್ತು.

ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ವರದಿಯ ನಿಖರತೆಯನ್ನು ಪ್ರಶ್ನಿಸುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ನಡೆದ ಹೆರಿಗೆಗಳನ್ನು ಪರಿಗಣಿಸದೆ, ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದ ಹೆರಿಗೆಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ವರದಿ ಸಿದ್ಧಪಡಿಸಲಾಗಿದೆ. ಜಿಲ್ಲೆಯ ಲಿಂಗಾನುಪಾತದ ಸಮಗ್ರ ಚಿತ್ರಣವನ್ನು ವರದಿಯಲ್ಲಿ ಕಾಣಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ.

ಗ್ರಾಮೀಣ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆಗಳನ್ನು ಗಣನೆಗೆ ತೆಗೆದುಕೊಂಡರಷ್ಟೇ ಲಿಂಗಾನುಪಾತದ ನಿಖರ ಮಾಹಿತಿ ಲಭ್ಯವಾಗಬಹುದು ಎನ್ನುವರು.

2011ರ ಜನಗಣತಿ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 0–6 ವಯೋಮಾನದಲ್ಲಿ 1000 ಗಂಡುಮಕ್ಕಳಿಗೆ 961 ಹೆಣ್ಣುಮಕ್ಕಳಿದ್ದರು. 2001ರ ಜನಗಣತಿ ಪ್ರಕಾರ ಈ ಪ್ರಮಾಣ 962 ಆಗಿತ್ತು.

ನಿರ್ದಿಷ್ಟ ಪ್ರದೇಶದಲ್ಲಿ ಎಷ್ಟು ಜನನ ಆಗಿದೆಯೋ ಆ ಮಾಹಿತಿಯ ಆಧಾರದಲ್ಲಿ ಎಚ್‌ಎಂಐಎಸ್ ವರದಿ ಸಿದ್ಧಪಡಿಸಲಾಗುತ್ತದೆ. ಕೇರಳ, ತಮಿಳುನಾಡಿನ ಗಡಿ ಭಾಗಗಳಿಂದಲೂ ಹೆರಿಗೆಗಾಗಿ ಮೈಸೂರಿಗೆ ಬರುತ್ತಾರೆ. ಮೈಸೂರಿನ ಎಷ್ಟೋ ಮಂದಿ ಹೆರಿಗೆಗೆ ಬೇರೆ ಕಡೆ ಹೋಗುವರು. ಆದ್ದರಿಂದ ಈ ವರದಿಯೇ ಅಂತಿಮ ಎನ್ನಲಾಗದು ಎಂದು ಪಿಸಿ ಆ್ಯಂಡ್ ಪಿಎನ್‌ಡಿಟಿ ಜಿಲ್ಲಾ ಸಂಯೋಜಕ ಕೆ.ಎ.ಶಿವಕುಮಾರ್ ಹೇಳುತ್ತಾರೆ.

ಜಿಲ್ಲೆಯಲ್ಲಿರುವ ಎಲ್ಲ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ಇಲಾಖೆಯು ನಿಗಾ ಇರಿಸಿದೆ. ಅಧಿಕಾರಿಗಳ ತಂಡ ಆಗಿಂದಾಗ್ಗೆ ದಾಳಿ ನಡೆಸುತ್ತಿರುತ್ತದೆ. ಪ್ರಸವಪೂರ್ವ ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಎಲ್ಲೂ ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಗಡಿ ಭಾಗಗಳಲ್ಲಿರುವ ಕೆಲವು ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಲಿಂಗ ಪತ್ತೆ ಪರೀಕ್ಷೆ ನಡೆಯುತ್ತವೆ ಎಂಬ ದೂರುಗಳು ಕೇಳಿಬಂದಿವೆ. ಆದರೆ ಸಾಕ್ಷ್ಯಗಳು ಸಿಗದ ಕಾರಣ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ವೈದ್ಯರು, ಸ್ಕ್ಯಾನಿಂಗ್‌ ಸೆಂಟರ್‌ನ ಸಿಬ್ಬಂದಿ ಮತ್ತು ಪರೀಕ್ಷೆಗೆ ಒಳಗಾದ ಮಹಿಳೆ ಅಥವಾ ಅವರ ಮನೆಯವರು ಎಲ್ಲವನ್ನೂ ಮುಚ್ಚಿಡುವರು ಎಂದು ಅಧಿಕಾರಿಯೊಬ್ಬರು ಹೇಳಿದರು.

ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಕುಸಿತ

ಮೈಸೂರು ಮಾತ್ರವಲ್ಲದೆ, ದಕ್ಷಿಣ ಕರ್ನಾಟಕದ ಇತರ ಕೆಲವು ಜಿಲ್ಲೆಗಳಲ್ಲೂ ಲಿಂಗಾನುಪಾತದಲ್ಲಿ ಕುಸಿತ ಉಂಟಾಗಿರುವುದು ವರದಿಯಿಂದ ಬಹಿರಂಗಗೊಂಡಿದೆ. ಕೊಡಗಿನಲ್ಲಿ 1000 ಗಂಡುಮಕ್ಕಳಿಗೆ ಹೆಣ್ಣುಮಕ್ಕಳ ಪ್ರಮಾಣ 909, ಮಂಡ್ಯದಲ್ಲಿ 911 ಮತ್ತು ಹಾಸನ ಜಿಲ್ಲೆಯಲ್ಲಿ 921 ಇರುವುದಾಗಿ ವರದಿ ತಿಳಿಸಿದೆ.