ಮೇಘಾಲಯ ಮುಖ್ಯಮಂತ್ರಿಯಾಗಿ ಕಾನ್ರಾಡ್​ ಸಂಗ್ಮಾ ಪ್ರಮಾಣವಚನ

0
17

ಹಿಮದ ನಾಡಿನಲ್ಲಿ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್​ ಸರ್ಕಾರವನ್ನು ಅಳಿಸಿ ಹಾಕಿ ನ್ಯಾಷನಲ್​ ಪೀಪಲ್ಸ್​ ಪಾರ್ಟಿಯ (ಎನ್​ಪಿಪಿ) ಅಧ್ಯಕ್ಷ ಕಾನ್ರಾಡ್​ ಸಂಗ್ಮಾ ಮೇಘಾಲಯದ 12ನೇ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸುವ ಮೂಲಕ ಕಾಂಗ್ರೆಸೇತರ ಸರ್ಕಾರಕ್ಕೆ ಮುನ್ನುಡಿ ಬರೆದರು.

ಕೇಂದ್ರ ಗೃಹಮಂತ್ರಿ ರಾಜ್​ನಾಥ್​ ಸಿಂಗ್​, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ, ಅಸ್ಸಾಂನ ಹಣಕಾಸು ಮಂತ್ರಿ ಹಾಗೂ ಎನ್​ಇಡಿಎ (ನಾರ್ತ್​​ ಈಸ್ಟ್​ ಡೆಮಾಕ್ರಟಿಕ್​ ಅಲಯನ್ಸ್​) ಮುಖ್ಯಸ್ಥ ಹಿಮಂತ ಬಿಸ್ವ ಶರ್ಮ ರಾಜಭವನದಲ್ಲಿ ನಡೆದ ಪ್ರಮಾಣವಚನದಲ್ಲಿ ಉಪಸ್ಥಿತರಿದ್ದರು.

ಎರಡು ದಿಗಳ ಹಿಂದಷ್ಟೇ ಕಾನ್ರಾಡ್ ಸಂಗ್ಮಾ ರಾಜ್ಯಪಾಲ ಗಂಗಾ ಪ್ರಸಾದ್​ರನ್ನು ಭೇಟಿಯಾಗಿ 34 ಸದಸ್ಯರ ಬಲದೊಂದಿಗೆ ಸರ್ಕಾರ ರಚಿಸುವುದಾಗಿ ಹಕ್ಕು ಮಂಡಿಸಿದ್ದರು. ಮೇಘಾಲಯದಲ್ಲಿ ಬಿಜೆಪಿ ಸೇರಿದಂತೆ 5 ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ ಎನ್​​ಪಿಪಿ ಸರ್ಕಾರ ರಚಿಸಿದೆ.

ಮಾರ್ಚ್​ 3ರಂದು ಪ್ರಕಟವಾಗಿದ್ದ ಮೇಘಾಲಯ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್​ 21 ಸ್ಥಾನ ಪಡೆದುಕೊಂಡಿದ್ದರೆ, ಎನ್​ಪಿಪಿ 19 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

60 ಸದಸ್ಯರ ವಿಧಾನಸಭೆಯಲ್ಲಿ 21 ಸ್ಥಾನ ಗೆದ್ದ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅಲ್ಲದೇ ಮೇಘಾಲಯದಲ್ಲಿ ಸರ್ಕಾರ ರಚನೆಗೂ ಹಕ್ಕು ಮಂಡಿಸಿತ್ತು. ಆದರೆ, ಬಹುಮತಕ್ಕೆ ಅಗತ್ಯ ಶಾಸಕರ ಬೆಂಬಲ ಪಡೆಯಲು ಕಾಂಗ್ರೆಸ್ ವಿಫಲವಾದ ಕಾರಣ ಎಸ್​ಪಿಪಿಗೆ ಸರ್ಕಾರ ರಚಿಸಿಕೊಳ್ಳಲು ಅವಕಾಶ ದೊರೆತಿದೆ.

ಯುನೈಟೆಡ್​ ಡೆಮಾಕ್ರಟಿಕ್​ ಪಾರ್ಟಿ(ಯುಡಿಪಿ), ಪೀಪಲ್ಸ್​ ಡೆಮಾಕ್ರಟಿಕ್​ ಫ್ರಂಟ್​ (ಪಿಡಿಎಫ್​), ಹಿಲ್​ ಸ್ಟೇಟ್​ ಪೀಪಲ್ಸ್​ ಡೆಮಾಕ್ರಟಿಕ್​ ಪಾರ್ಟಿ (ಎಚ್​ಎಸ್​ಪಿಡಿಪಿ), ಬಿಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿಯ ಬೆಂಬಲ ಪಡೆದು ಸಂಗ್ಮಾ ಸರ್ಕಾರ ರಚಿಸಿದ್ದಾರೆ. ಯುಡಿಪಿ-6, ಪಿಡಿಎಫ್​-4, ಎಚ್​ಎಸ್​ಪಿಡಿಪಿ- ಎರಡು ಮತ್ತು ಬಿಜೆಪಿ-ಎರಡು ಸೀಟುಗಳನ್ನು ಗೆದ್ದಿತ್ತು.