ಮೇರಿ ಕೋಮ್ ವಿಶ್ವ ನಂ.1 ಬಾಕ್ಸರ್

0
730

ದಾಖಲೆಯ 6ನೇ ವಿಶ್ವ ಚಾಂಪಿಯನ್​ಷಿಪ್ ಸ್ವರ್ಣ ಪದಕ ಜಯಿಸಿದ್ದ ಭಾರತ ಅನುಭವಿ ಬಾಕ್ಸರ್ ಮೇರಿ ಕೋಮ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ(ಎಐಬಿಎ) ರ‍್ಯಾಂಕಿಂಗ್‌​ನಲ್ಲಿ ವಿಶ್ವ ನಂ.1 ಆಗಿದ್ದಾರೆ.

ನವದೆಹಲಿ: ಕಳೆದ ವರ್ಷ ದಾಖಲೆಯ 6ನೇ ವಿಶ್ವ ಚಾಂಪಿಯನ್​ಷಿಪ್ ಸ್ವರ್ಣ ಪದಕ ಜಯಿಸಿದ್ದ ಭಾರತ ಅನುಭವಿ ಬಾಕ್ಸರ್ ಮೇರಿ ಕೋಮ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ(ಎಐಬಿಎ) ರ‍್ಯಾಂಕಿಂಗ್‌​ನಲ್ಲಿ ವಿಶ್ವ ನಂ.1 ಆಗಿದ್ದಾರೆ. 48ಕೆ.ಜಿ ಮಹಿಳಾ ವಿಭಾಗದಲ್ಲಿ ಒಟ್ಟು 1700 ಪಾಯಿಂಟ್​ಗಳೊಂದಿಗೆ ಮೇರಿ ಕೋಮ್ ಅಗ್ರಸ್ಥಾನಕ್ಕೇರಿದರು. ಉಕ್ರೇನ್​ನ ಒಕ್ಕೊಟ ಹನ್ನಾ ಇದೇ ವಿಭಾಗದಲ್ಲಿ 1100 ಅಂಕಗಳಿಂದ 2ನೇ ಸ್ಥಾನದಲ್ಲಿದ್ದಾರೆ. 36 ವರ್ಷದ ಮೇರಿ ಕೋಮ್ ಅವರು ವಿಶ್ವ ಚಾಂಪಿಯನ್​ಷಿಪ್ ಪದಕ ಗೆಲ್ಲುವ ದೃಷ್ಟಿಯಿಂದ ಒಲಿಂಪಿಕ್​ನ 51 ಕೆಜಿ ವಿಭಾಗದಿಂದ ತಮ್ಮ ಎಂದಿನ 48 ಕೆಜಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು. ಕಳೆದ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಮೇರಿ ಕೋಮ್ ಸ್ವರ್ಣ ಪದಕ ಜಯಿಸಿದ್ದರೆ, ಬಲ್ಗೇರಿಯಾದಲ್ಲಿ ನಡೆದ ಸ್ಟ್ರಾಂಡ್​ಜಾ ಮೆಮೋರಿಯಲ್ ಟೂರ್ನಿಯಲ್ಲಿ ಬೆಳ್ಳಿ ಗೆದ್ದಿದ್ದರು.

ಇನ್ನುಳಿದಂತೆ ಭಾರತದ ಇತರ ಬಾಕ್ಸರ್​ಗಳ ಪೈಕಿ ಪಿಂಕಿ ಜಾಂಗ್ರಾ 51 ಕೆ.ಜಿ ವಿಭಾಗದಲ್ಲಿ 8ನೇ ಸ್ಥಾನಕ್ಕೇರಿದರೆ, ಏಷ್ಯನ್ ಬೆಳ್ಳಿ ಪದಕ ವಿಜೇತೆ ಮನಿಷಾ ಮೌನ್ 54 ಕೆ.ಜಿ ವಿಭಾಗದಲ್ಲಿ ಅದೇ ಸ್ಥಾನದಲ್ಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್​ಷಿಪ್ ಬೆಳ್ಳಿ ಪದಕ ವಿಜೇತೆ ಸೋನಿಯಾ ಲಾಥರ್ 57ಕೆ.ಜಿ ವಿಭಾಗದಲ್ಲಿ 2ನೇ ಸ್ಥಾನಕ್ಕೇರಿದರು. -ಏಜೆನ್ಸೀಸ್