ಚಲನೆಯಲ್ಲಿರುವ ಬಯೋ ಮಾಲಿಕ್ಯೂಲ್ಗಳ ವಿನ್ಯಾಸ ನಿರ್ಧರಿಸಲು ಅನುಕೂಲವಾಗುವ ಕ್ರೖೆಯೊ-ಎಲೆಕ್ಟ್ರಾನ್ ಮೈಕ್ರೊಸ್ಕೋಪಿ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ರಸಾಯನಶಾಸ್ತ್ರ ವಿಭಾಗದಲ್ಲಿ 2017ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಬ್ರಿಟನ್, ಅಮೆರಿಕ ಮತ್ತು ಸ್ವಿಜರ್ಲೆಂಡ್ ವಿಜ್ಞಾನಿಗಳು ಹಂಚಿಕೊಂಡಿದ್ದಾರೆ.
ಜ್ಯಾಕಸ್ ಡ್ಯುಬೊಶೆ, ಜೊಯಾಶಿಮ್ ಫ್ರಾಂಕ್ ಮತ್ತು ರಿಚರ್ಡ್ ಹೆಂಡರ್ಸೆನ್ 2017ನೇ ಸಾಲಿನ ರಸಾಯನಶಾಸ್ತ್ರ ವಿಭಾಗದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ನೂತನ ಶಿಥಿಲೀಕರಣ ಪದ್ಧತಿಯಿಂದ ಬೇಕೆಂದಾಗ ಅಣುಗಳ ಚಲನೆಯ ವಿನ್ಯಾಸದ ಮೂರು ಆಯಾಮಗಳ(3ಡಿ) ಫೋಟೊ ಪಡೆಯುವುದು ಸುಲಭವಾಗಿದೆ. ಯಾವುದೇ ಡೈ ಬಳಸದೆ ಅಣುಗಳನ್ನು ಹೆಪು್ಪಗಟ್ಟಿಸಿ ನೈಸರ್ಗಿಕ ಸ್ಥಿತಿಯಲ್ಲಿಯೇ ಅಧ್ಯಯನ ಸಾಧ್ಯವಾಗಿದೆ ಎಂದು ನೊಬೆಲ್ ರಸಾಯನಶಾಸ್ತ್ರ ಸಮಿತಿ ತಿಳಿಸಿದೆ. ಮಾರಣಾಂತಿಕ ಝಿಕಾ ವೈರೆಸ್ನಿಂದ ಮೆದುಳಿನ ಮೇಲಾಗುವ ಪರಿಣಾಮಗಳ ಅಧ್ಯಯನಕ್ಕೆ ವಿಜ್ಞಾನಿಗಳ ಸಂಶೋಧನೆ ನೆರವಾಗಿದೆ.
ವಿಜ್ಞಾನಿಗಳ ಸಾಧನೆ:-
1990ರಲ್ಲಿ ಬ್ರಿಟನ್ನ ಕೇಂಬ್ರಿಡ್ಜ್ ವಿವಿ ಪ್ರಾಧ್ಯಾಪಕ ರಿಚರ್ಡ್ ಹೆಂಡರ್ಸನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ನಿಂದ ಒಂದು ಪ್ರೊಟೀನ್ ಅಣುವಿನ 3ಡಿ ಚಿತ್ರ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರು.
1986ರಲ್ಲಿ ಅಮೆರಿಕದ ಕೊಲಂಬಿಯಾ ವಿವಿ ಪ್ರಾಧ್ಯಾಪಕ ಜೊಯಾಶಿಮ್ ಫ್ರಾಂಕ್ 2ಡಿ ಚಿತ್ರಗಳನ್ನು ಸಂಸ್ಕರಿಸಿ ಅವುಗಳ ಜೋಡಣೆಯಿಂದ 3ಡಿ ವಿನ್ಯಾಸ ರಚನೆಯ ಪದ್ಧತಿಯನ್ನು ಅಭಿವೃದ್ಧಿಪಡಿಸಿದ್ದರು.
1980ರಲ್ಲಿ ಸ್ವಿಜರ್ಲೆಂಡ್ನ ಲೌಸನ್ನೆ ವಿವಿ ಪ್ರಾಧ್ಯಾಪಕ ಜ್ಯಾಕಸ್ ಡುಬೊಶೆ ಎಲೆಕ್ಟ್ರಾನ್ ಮೈಕ್ರೊಸ್ಕೋಪ್ಗೆ ನೀರು ಸೇರಿಸಿದ್ದರು. ಕಣಗಳು ತುಂಡರಿಸದಂತೆ ಕ್ಷಣ ಮಾತ್ರದಲ್ಲಿ ನೀರನ್ನು ಅತೀ ಕಡಿಮೆ ತಾಪಮಾನದಲ್ಲಿ ಹೆಪು್ಪಗಟ್ಟಿಸಿ ಜೈವಿಕ ಅಣುಗಳ ನೈಸರ್ಗಿಕ ವಿನ್ಯಾಸದ ಅಧ್ಯಯನಕ್ಕೆ ನಾಂದಿ ಹಾಡಿದ್ದರು.