ಮುಂಬೈ ಮೇಲೆ ಉಗ್ರರ ದಾಳಿಗೆ ದಶಕ (ಇನ್ನೂ ಮಾಸದ ಕರಾಳ ನೆನಪು)

0
198

ವಾಣಿಜ್ಯ ನಗರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಗೆ ಈಗ ದಶಕ. ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ಇದಾಗಿತ್ತು. ಈ ಕರಾಳ ಘಟನೆ ದೇಶದ ಆಂತರಿಕ ಸುರಕ್ಷತೆ ಮತ್ತು ಭದ್ರತೆಗೂ ಸವಾಲೊಡ್ಡಿತ್ತು. 2008ರ ನವೆಂಬರ್‌ 26ರಂದು ಲಷ್ಕರ್–ಎ–ತಯಬ (ಎಲ್‌ಇಟಿ) ಸಂಘಟನೆಯ ಹತ್ತು ಪಾಕಿಸ್ತಾನಿ ಉಗ್ರರು ಸಮುದ್ರದ ಮೂಲಕ ಕರಾಚಿಯಿಂದ ದೋಣಿಯಲ್ಲಿ ಬಂದು ಮುಂಬೈಗೆ ನುಸುಳಿದ್ದರು. ನಗರದ ಹೃದಯ ಭಾಗದಲ್ಲಿರುವ ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಲ್‌, ತಾಜ್‌ಮಹಲ್‌ ಹೋಟೆಲ್‌, ಟ್ರೈಡೆಂಟ್‌ ಹೋಟೆಲ್‌ ಮತ್ತು ಯಹೂದಿ ಕೇಂದ್ರಗಳ ಮೇಲೆ ಈ ಉಗ್ರರು ಗುಂಡಿನ ದಾಳಿ ನಡೆಸಿ ಅಮಾಯಕರನ್ನು ಬಲಿತೆಗೆದುಕೊಂಡಿದ್ದರು.

ನವದೆಹಲಿ/ಮುಂಬೈ/ವಡೋದರ (ಪಿಟಿಐ): ವಾಣಿಜ್ಯ ನಗರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಗೆ ಈಗ ದಶಕ. ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ಇದಾಗಿತ್ತು. ಈ ಕರಾಳ ಘಟನೆ ದೇಶದ ಆಂತರಿಕ ಸುರಕ್ಷತೆ ಮತ್ತು ಭದ್ರತೆಗೂ ಸವಾಲೊಡ್ಡಿತ್ತು.

2008ರ ನವೆಂಬರ್‌ 26ರಂದು ಲಷ್ಕರ್–ಎ–ತಯಬ (ಎಲ್‌ಇಟಿ) ಸಂಘಟನೆಯ ಹತ್ತು ಪಾಕಿಸ್ತಾನಿ ಉಗ್ರರು ಸಮುದ್ರದ ಮೂಲಕ ಕರಾಚಿಯಿಂದ ದೋಣಿಯಲ್ಲಿ ಬಂದು ಮುಂಬೈಗೆ ನುಸುಳಿದ್ದರು. ನಗರದ ಹೃದಯ ಭಾಗದಲ್ಲಿರುವ ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಲ್‌, ತಾಜ್‌ಮಹಲ್‌ ಹೋಟೆಲ್‌, ಟ್ರೈಡೆಂಟ್‌ ಹೋಟೆಲ್‌ ಮತ್ತು ಯಹೂದಿ ಕೇಂದ್ರಗಳ ಮೇಲೆ ಈ ಉಗ್ರರು ಗುಂಡಿನ ದಾಳಿ ನಡೆಸಿ ಅಮಾಯಕರನ್ನು ಬಲಿತೆಗೆದುಕೊಂಡಿದ್ದರು.

10 ದೇಶಗಳ 28 ವಿದೇಶಿಯರು ಸೇರಿದಂತೆ 166 ಮಂದಿ ಉಗ್ರರ ದಾಳಿಗೆ ಜೀವತೆತ್ತಿದ್ದರು. ಒಂಬತ್ತು ಉಗ್ರರನ್ನು ಕಮಾಂಡೊ ಪಡೆಗಳ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಅಜ್ಮಲ್‌ ಕಸಾಬ್‌ ಮಾತ್ರ ಜೀವಂತವಾಗಿ ಸೆರೆ ಸಿಕ್ಕಿದ್ದ.

ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್‌ ಕರ್ಕರೆ, ಐಪಿಎಸ್‌ ಅಧಿಕಾರಿ ಅಶೋಕ್‌ ಕಾಮ್ಟೆ ಹಾಗೂ ಎನ್‌ಕೌಂಟರ್ ಪರಿಣತ ವಿಜಯ ಸಲಾಸ್ಕರ್‌ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು.

ಈ ದಾಳಿಯಿಂದ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಮುಂಬೈ ನಗರ ತಲ್ಲಣಗೊಂಡು ಸ್ತಬ್ಧಗೊಂಡಿತ್ತು. ಜತೆಗೆ ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟು, ಯುದ್ಧದ ಸನ್ನಿವೇಶವನ್ನೇ ಸೃಷ್ಟಿಸಿತ್ತು. ದೇಶದ ಸಾರ್ವಭೌಮತೆ ಮೇಲೆ ದಾಳಿ ನಡೆಸಲಾಗಿದೆ ಎನ್ನುವ ಆತಂಕ ಮತ್ತು ಎಚ್ಚರಿಕೆಯ ಮಾತುಗಳು ಕೇಳಿ ಬಂದಿದ್ದವು.

ಕರಾವಳಿ ಭದ್ರತಾ ಪಡೆಯಲ್ಲಿನ ಲೋಪದೋಷಗಳು, ಬೇಹುಗಾರಿಕೆ ಮಾಹಿತಿ ಸಂಗ್ರಹದಲ್ಲಿನ ವೈಫಲ್ಯ ಹಾಗೂ ವಿವಿಧ ಭದ್ರತಾ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯನ್ನು ಸಹ ದಾಳಿ ಎತ್ತಿ ತೋರಿಸಿತ್ತು.

‘ದಾಳಿ ನಡೆದು ಹತ್ತು ವರ್ಷಗಳಾದರೂ ಪಾಕಿಸ್ತಾನ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪಾಕಿಸ್ತಾನ ಸರ್ಕಾರವೇ ಇದಕ್ಕೆ ಹೊಣೆ’ ಎಂದು ಹಿರಿಯ ವಕೀಲ ಮತ್ತು ಮುಂಬೈ ದಾಳಿ ಪ್ರಕರಣದಲ್ಲಿ ವಿಶೇಷ ಸರ್ಕಾರಿ ವಕೀಲರಾಗಿದ್ದ ಉಜ್ವಲ್‌ ನಿಕ್ಕಂ ಹೇಳಿದ್ದಾರೆ.

ದಾಳಿಯ ಪ್ರಮುಖ ಸಂಚುಕೋರ ಎನ್ನಲಾದ, ನಿಷೇಧಿತ ಜಮಾತ್‌–ಉದ್‌– ದವಾ (ಜೆಯುಡಿ) ಮುಖ್ಯಸ್ಥ ಹಫೀಜ್‌ ಸಯೀದ್‌ ಪಾಕಿಸ್ತಾನದಲ್ಲಿ ಈಗ ಮುಕ್ತವಾಗಿ ಸಂಚರಿಸುತ್ತಿದ್ದಾನೆ. ಜತೆಗೆ, ಈ ದಾಳಿಗೆ ಸಂಬಂಧಪಟ್ಟ ಪಾಕಿಸ್ತಾನದ ಶಂಕಿತ ಏಳು ಮಂದಿಗೂ ಇನ್ನೂ ಯಾವುದೇ ರೀತಿಯ ಶಿಕ್ಷೆಯಾಗಿಲ್ಲ.