ಮಾ.31ರೊಳಗೆ ಆಧಾರ್‌-ಪ್ಯಾನ್‌ ಜೋಡಣೆ ಕಡ್ಡಾಯ

0
694

ಆದಾಯ ತೆರಿಗೆ ವಿವರ ಸಲ್ಲಿಕೆಗೆ(ಐಟಿಆರ್‌ ರಿಟರ್ನ್‌) ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆ ಜೋಡಣೆ ಮಾಡುವುದು ಇನ್ನು ಮುಂದೆ ಕಡ್ಡಾಯವಾಗಿದ್ದು, ಮಾರ್ಚ್‌ 31ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ.

ಹೊಸದಿಲ್ಲಿ: ಆದಾಯ ತೆರಿಗೆ ವಿವರ ಸಲ್ಲಿಕೆಗೆ(ಐಟಿಆರ್‌ ರಿಟರ್ನ್‌) ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆ ಜೋಡಣೆ ಮಾಡುವುದು ಇನ್ನು ಮುಂದೆ ಕಡ್ಡಾಯವಾಗಿದ್ದು, ಮಾರ್ಚ್‌ 31ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ. 

ಆಧಾರ್‌ಗೆ ಸುಪ್ರೀಂ ಕೋರ್ಟ್‌ 2018ರ ಸೆಪ್ಟೆಂಬರ್‌ನಲ್ಲಿ ಶಾಸನಾತ್ಮಕ ಮಾನ್ಯತೆ ನೀಡಿದ್ದು, ಐಟಿಆರ್‌ ದಾಖಲಿಸಲು ಆಧಾರ್‌ ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ಯಾನ್‌ ಜೊತೆ ಆಧಾರ್‌ ಜೋಡಣೆ ಮಾಡದವರು ಗಮನ ಹರಿಸಬೇಕು. ಮಾ.31ರೊಳಗೆ ಇದೆಲ್ಲವನ್ನೂ ಪೂರ್ಣಗೊಳಿಸಬೇಕು. ಆಧಾರ್‌ ಇಲ್ಲದೇ ಐಟಿಆರ್‌ ಸಾಧ್ಯವಿಲ್ಲ ಎಂದು ಮಾರ್ಗಸೂಚಿಯಲ್ಲಿ ಸಿಡಿಬಿಟಿ ಹೇಳಿದೆ. 

ಐಟಿಆರ್‌ ಸಲುವಾಗಿ ಪ್ಯಾನ್‌-ಆಧಾರ್‌ ಜೋಡಣೆ ಕಡ್ಡಾಯ ಎನ್ನುವ ಅಂಶವನ್ನು ಸುಪ್ರೀಂ ಕೋರ್ಟ್‌ ಕಳೆದ ಫೆ.6ರ ಆದೇಶದಲ್ಲಿ ಸ್ಪಷ್ಟಪಡಿಸಿತ್ತು. 2018-19ರ ಐಟಿಆರ್‌ ಅನ್ನು ಆಧಾರ್‌ ಇಲ್ಲದೆಯೇ ದಾಖಲಿಸಿದ್ದ ಇಬ್ಬರು ತೆರಿಗೆದಾರರ ವಿರುದ್ಧ ತೆರಿಗೆ ಇಲಾಖೆ ತಕರಾರು ತೆಗೆದಿತ್ತು. 

ತಕರಾರನ್ನು ರದ್ದು ಮಾಡಿದ್ದ ದಿಲ್ಲಿ ಹೈಕೋರ್ಟ್‌, ಆ ತೆರಿಗೆದಾರರ ಕ್ರಮಕ್ಕೆ ಅಸ್ತು ಎಂದಿತ್ತು. ಈಗ ದಿಲ್ಲಿ ಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದ್ದು, ಐಟಿ ಕಾಯ್ದೆಯ ಸೆಕ್ಷನ್‌ 139ಎಎ ಅನ್ನು ಎತ್ತಿ ಹಿಡಿದಿದೆ. ಆಧಾರ್‌ ಅನ್ನು ಕಡ್ಡಾಯಗೊಳಿಸಿದೆ.