ಮಾಲ್ಡೀವ್ಸ್‌: ಎಂಡಿಪಿಗೆ ಅಭೂತಪೂರ್ವ ಜಯ

0
252

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ಮೊಹಮದ್‌ ನಶೀದ್‌ (51) ನೇತೃತ್ವದ ಮಾಲ್ಡೀವಿಯನ್‌ ಡೆಮಾಕ್ರಟಿಕ್‌ ಪಕ್ಷ (ಎಂಡಿಪಿ) ಅಭೂತಪೂರ್ವ ಜಯಗಳಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.

ಮಾಲೆ (ಎಎಫ್‌ಪಿ): ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ಮೊಹಮದ್‌ ನಶೀದ್‌ (51) ನೇತೃತ್ವದ ಮಾಲ್ಡೀವಿಯನ್‌ ಡೆಮಾಕ್ರಟಿಕ್‌ ಪಕ್ಷ (ಎಂಡಿಪಿ) ಅಭೂತಪೂರ್ವ ಜಯಗಳಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.

87 ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ನಶೀದ್‌ ಅವರ ಎಂಡಿಪಿ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಿದೆ.

ಈ ಚುನಾವಣೆಯಲ್ಲಿ ನಶೀದ್‌ ವಿರೋಧಿ ಹಾಗೂ ಸರ್ವಾಧಿಕಾರಿ ಎಂದೇ ಬಿಂಬಿಸಲಾಗಿದ್ದ ಅಬ್ದುಲ್ಲಾ ಯಾಮೀನ್‌ ಅವರಿಗೆ ಭಾರಿ ಹಿನ್ನಡೆಯಾಗಿದೆ. ಭ್ರಷ್ಟಾಚಾರ ಮತ್ತು ವಂಚನೆ ಆರೋಪ ಪ್ರಕರಣಗಳಿಂದಾಗಿ ಯಾಮೀನ್‌ ಅವರಿಗೆ ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲೂ ಹಿನ್ನಡೆಯಾಗಿತ್ತು.

ಯಾಮೀನ್‌ ಅವರ ’ಪ್ರೊಗ್ರೆಸಿವ್‌ ಪಾರ್ಟಿ ಆಫ್‌ ಮಾಲ್ಡೀವ್ಸ್‌’ ಕೇವಲ ನಾಲ್ಕು ಸ್ಥಾನಗಳನ್ನು ಗಳಿಸಿ ಹೀನಾಯ ಸೋಲು ಅನುಭವಿಸಿದೆ.

ಏಪ್ರೀಲ್ 6 ರ  ಶನಿವಾರ ನಡೆದ ಚುನಾವಣೆಯಲ್ಲಿ ಒಟ್ಟು 87 ಸ್ಥಾನಗಳ ಪೈಕಿ ಎಂಡಿಪಿ 60 ಸ್ಥಾನಗಳಲ್ಲಿ ಜಯಗಳಿಸಿದೆ. ಪಕ್ಷೇತರರು ಸಹ ಎಂಡಿಪಿಗೆ ಬೆಂಬಲ ಸೂಚಿಸುವ ನಿರೀಕ್ಷೆ ಇದೆ. ಸಂಪೂರ್ಣ ಫಲಿತಾಂಶ ಪ್ರಕಟವಾಗಲು ಇನ್ನು ಕೆಲವು ದಿನಗಳು ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಶೀದ್‌ ಅವರ ಪಕ್ಷದ ಬಣ್ಣ ಹಳದಿ. ಹೀಗಾಗಿ, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ‘ಹಳದಿ ಚಿನ್ನ ಪ್ರಕಾಶಿಸುತ್ತಿದೆ’ ಎಂದು ನಶೀದ್‌ ಬಣ್ಣಿಸಿದರು.

ಮಾಲ್ಡೀವ್ಸ್‌ನಲ್ಲಿ ಸಂಸದರು ದುಬಾರಿ ಬೆಲೆಯ ಕಾಣಿಕೆಗಳನ್ನು ಪಡೆದಿರುವುದು ಮತ್ತು ಭ್ರಷ್ಟಾಚಾರ ಪ್ರಕರಣಗಳನ್ನು ಪ್ರಸ್ತಾಪಿಸಿರುವ ನಶೀದ್‌,  ’ಇನ್ನು ಮುಂದೆ ರೊಲೆಕ್ಸ್‌ ವಾಚ್‌ಗಳ ಮತ್ತು ಕೊಹಿನೂರ್‌ ದಿನಗಳು ಮುಗಿಯಲಿವೆ’ಎಂದು ಹೇಳಿದ್ದಾರೆ.

 ರಾಜಕೀಯ ಬೆಳವಣಿಗೆಗಳು

# 2008ರಲ್ಲಿ ನಡೆದ ರಾಜಕೀಯ ಸುಧಾರಣೆ ಅಂಗವಾಗಿ ಅಧ್ಯಕ್ಷೀಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. 30 ವರ್ಷಗಳ ಆಡಳಿತ ನಡೆಸಿದ್ದ ಸರ್ವಾಧಿಕಾರಿ ಮೌಮೂನ್‌ ಅಬ್ದುಲ್‌ ಗಯೂಮ್‌ ಅಧಿಕಾರದಿಂದ ಕೆಳಗಿಳಿದ ಬಳಿಕ ಈ ಸುಧಾರಣೆ ತರಲಾಯಿತು.

# 2008ರಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿ ಆಯ್ಕೆಯಾದ ಮೊದಲ ಅಧ್ಯಕ್ಷ ಮೊಹಮದ್‌ ನಶೀದ್‌.

# 2015ರಲ್ಲಿ ಅಬ್ದುಲ್ಲಾ ಯಾಮೀನ್‌ ಅವರ ಆಡಳಿತದಲ್ಲಿ ಮೊಹಮದ್‌ ನಶೀದ್‌ ಅವರಿಗೆ ಭಯೋತ್ಪಾದನೆ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ, ಒಂದೇ ವರ್ಷದಲ್ಲಿ ಬ್ರಿಟನ್‌ನಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ದೊರೆಯಿತು.

# 2018ರ ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ನಶೀದ್‌ ವಿರೋಧಿ ಅಬ್ದುಲ್ಲಾ ಯಾಮೀನ್‌ ಅವರನ್ನು ಸೊಲಿಹ್‌ ಪರಾಭವಗೊಳಿಸಿದರು. ಸೊಲಿಹ್‌ ಅಧಿಕಾರಕ್ಕೆ ಬಂದ ಬಳಿಕ ಗಡಿಪಾರಾಗಿದ್ದ ನಶೀದ್‌ ಮಾಲ್ಡೀವ್ಸ್‌ಗೆ ಹಿಂತಿರುಗಿದರು.

# ಸುಪ್ರೀಂಕೋರ್ಟ್‌ ಸಹ ನಶೀದ್‌ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಿತು.

 

“ಸುಧಾರಣೆ ತರಲಾಗುವುದು. ಸರ್ಕಾರದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸಂಕಲ್ಪ ಮಾಡಿದ್ದೇನೆ”

                                                                –   ನಶೀದ್‌, ಮಾಜಿ ಅಧ್ಯಕ್ಷ ಮಾಲ್ಡೀವ್ಸ್