ಮಾರ್ಚ್‌ ತಿಂಗಳಲ್ಲಿ ದಾಖಲೆಯ ಜಿಎಸ್‌ಟಿ ಸಂಗ್ರಹ: 1.06 ಲಕ್ಷ ಕೋಟಿ ರೂ.ಗೆ ಏರಿಕೆ

0
515

ಕಳೆದ 2018-19ರ ಸಾಲಿನಲ್ಲಿ ಬಜೆಟ್‌ ಅಂದಾಜು ಗುರಿಯನ್ನೂ ಮೀರಿ ಜಿಎಸ್‌ಟಿ ಸಂಗ್ರಹವಾಗಿದ್ದು, ಒಟ್ಟು 11.77 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಮಾರ್ಚ್‌ ತಿಂಗಳೊಂದರಲ್ಲಿಯೇ 1.06 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಜಿಎಸ್‌ಟಿ ಆರಂಭವಾದಂದಿನಿಂದ ಇದುವರೆಗಿನ ಮಾಸಿಕ ಗರಿಷ್ಠ ಮಟ್ಟದ ಕಲೆಕ್ಷನ್‌ ಆಗಿದೆ.

ಹೊಸದಿಲ್ಲಿ: ಕಳೆದ 2018-19ರ ಸಾಲಿನಲ್ಲಿ ಬಜೆಟ್‌ ಅಂದಾಜು ಗುರಿಯನ್ನೂ ಮೀರಿ ಜಿಎಸ್‌ಟಿ ಸಂಗ್ರಹವಾಗಿದ್ದು, ಒಟ್ಟು 11.77 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಮಾರ್ಚ್‌ ತಿಂಗಳೊಂದರಲ್ಲಿಯೇ 1.06 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಜಿಎಸ್‌ಟಿ ಆರಂಭವಾದಂದಿನಿಂದ ಇದುವರೆಗಿನ ಮಾಸಿಕ ಗರಿಷ್ಠ ಮಟ್ಟದ ಕಲೆಕ್ಷನ್‌ ಆಗಿದೆ. 

2018-19ರ ಸಾಲಿನಲ್ಲಿ ಬಜೆಟ್‌ ಪ್ರಕಾರ 11.47 ಲಕ್ಷ ಕೋಟಿ ರೂ. ಗಳ ಅಂದಾಜು ಗುರಿ ನಿಗದಿಯಾಗಿತ್ತು. 

‘2019ರ ಮಾರ್ಚ್‌ನಲ್ಲಿ ದಾಖಲೆಯ ಜಿಎಸ್‌ಟಿ ಸಂಗ್ರಹವಾಗಿರುವುದು, ಉತ್ಪಾದನೆ ಮತ್ತು ಬಳಕೆಯ ವಲಯದಲ್ಲಿ ಉಂಟಾಗಿರುವ ವಿಸ್ತರಣೆಯನ್ನು ಬಿಂಬಿಸುತ್ತದೆ” ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ. 

ಮಾರ್ಚ್‌ನಲ್ಲಿ 75.95 ಲಕ್ಷ ಮಾಸಿಕ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆಯಾಗಿದ್ದು, 2017ರ ಜುಲೈ 1ರಂದು ಜಿಎಸ್‌ಟಿ ಜಾರಿಯಾದಂದಿನಿಂದ ಇದೂ ಒಂದು ದಾಖಲೆಯೇ ಆಗಿದೆ. ಸಿಜಿಎಸ್‌ಟಿ 20,353 ಕೋಟಿ ರೂ, ಎಸ್‌ಜಿಎಸ್‌ಟಿ 27,520 ಕೋಟಿ ರೂ, ಐಜಿಎಸ್‌ಟಿ 50,418 ಕೋಟಿ ರೂ.ಗೆ ಏರಿಕೆಯಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಜಿಎಸ್‌ಟಿ ಕಲೆಕ್ಷನ್‌ ಸುಧಾರಿಸುತ್ತಿರುವುದನ್ನು ಇದು ಬಿಂಬಿಸಿದೆ. 

2019-20ರಲ್ಲಿ ಜಿಎಸ್‌ಟಿ ಸಂಗ್ರಹದ ಬಜೆಟ್‌ ಗುರಿ 13.71 ಲಕ್ಷ ಕೋಟಿ ರೂ.ಗಳಾಗಿದೆ. ಜಿಎಸ್‌ಟಿ ಅಡಿಯಲ್ಲಿ ಶೇ.5, ಶೇ.12, ಶೇ.18 ಮತ್ತು ಶೇ.28ರ ತೆರಿಗೆ ಶ್ರೇಣಿಗಳಿದ್ದು, ಜಿಎಸ್‌ಟಿ ಮಂಡಳಿಯು ಯಾವ ವಸ್ತು, ಸೇವೆಗೆ ಎಷ್ಟು ಜಿಎಸ್‌ಟಿ ಎಂಬುದನ್ನು ನಿರ್ಧರಿಸುತ್ತದೆ. 

2018-19ರ ಸಾಲಿನ ಸರಾಸರಿ ಜಿಎಸ್‌ಟಿ 98,114 ಕೋಟಿ ರೂ.ಗಳಾಗಿದ್ದು, ಶೇ.9.2ರಷ್ಟು ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಜಿಎಸ್‌ಟಿ ಪದ್ಧತಿಯಿಂದ ಹಲವು ಪ್ರಯೋಜನಗಳಾಗಿರುವುದು ಕಂಡು ಬಂದಿದೆ. ನಾನಾ ಸಾಮಾಜಿಕ ಯೋಜನೆಗಳ ಜಾರಿಗೆ ಇದರಿಂದ ಸಹಕಾರಿಯಾಗಲಿದೆ.