ಮಾನವ ಕಳ್ಳಸಾಗಣೆ: ಮಕ್ಕಳೇ ಹೆಚ್ಚು(ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಯುರೋಪ್‌–ಕೊಲ್ಲಿ ದೇಶಗಳಿಗೆ ಸಂತ್ರಸ್ತರ ರವಾನೆ)

0
552

ಮಾನವ ಕಳ್ಳಸಾಗಣೆಯು ಭಯಾನಕ ಸ್ವರೂಪ ಪಡೆಯುತ್ತಿದ್ದು, ಈ ಜಾಲಕ್ಕೆ ತುತ್ತಾಗುತ್ತಿರುವ ಪ್ರತಿ ಮೂವರ ಪೈಕಿ ಒಬ್ಬ ಬಾಲಕ ಅಥವಾ ಬಾಲಕಿ ಇರುತ್ತಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

ವಿಶ್ವಸಂಸ್ಥೆ (ಪಿಟಿಐ): ಮಾನವ ಕಳ್ಳಸಾಗಣೆಯು ಭಯಾನಕ ಸ್ವರೂಪ ಪಡೆಯುತ್ತಿದ್ದು, ಈ ಜಾಲಕ್ಕೆ    ತುತ್ತಾಗುತ್ತಿರುವ  ಪ್ರತಿ ಮೂವರ ಪೈಕಿ ಒಬ್ಬ  ಬಾಲಕ ಅಥವಾ ಬಾಲಕಿ ಇರುತ್ತಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳಿಂದ ಯುರೋಪ್‌ನ ವಿವಿಧ ಕಡೆಗೆ ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ಮಾದಕ ವಸ್ತು ಮತ್ತು ಅಪರಾಧ ಕುರಿತ ವಿಶ್ವಸಂಸ್ಥೆ  ಸಂಘಟನೆ (ಯುಎನ್‌ಒಡಿಸಿ)  ನೀಡಿದ ವರದಿ ಹೇಳಿದೆ. 

ಸಂತ್ರಸ್ತರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದೇ ಈ ಜಾಲದ ಪ್ರಮುಖ ಉದ್ದೇಶವಾಗಿರುತ್ತದೆ. ಈ ಜಾಲಕ್ಕೆ ಬಲಿಯಾದವರ ಪೈಕಿ ಬಾಲಕರಿಗಿಂತ ಬಾಲಕಿಯರ ಸಂಖ್ಯೆಯೇ ಹೆಚ್ಚು.

‘ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಹೆಚ್ಚು ಮಾನವ ಕಳ್ಳಸಾಗಣೆ ನಡೆಯುತ್ತಿದೆ. ಅದೇ ರೀತಿ, ಅಫ್ಗಾನಿಸ್ತಾನದಿಂದ ನೆದರ್ಲೆಂಡ್‌ ಮತ್ತು ಇಂಗ್ಲೆಂಡ್‌ಗೆ ಕಳ್ಳಸಾಗಣೆ ನಡೆಯುತ್ತಿದೆ’ ಎಂದು ವರದಿ ಹೇಳಿದೆ.

ದಕ್ಷಿಣ ಏಷ್ಯಾದಿಂದಲೇ 40ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಮಾನವ ಕಳ್ಳಸಾಗಣೆ ನಡೆಯುತ್ತಿದೆ.

ಈ ಸಂತ್ರಸ್ತರನ್ನು ಅಂತಿಮವಾಗಿ ಕೊಲ್ಲಿ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿದೆ. 2010ರಿಂದೀಚೆಗೆ ಮಾನವ ಕಳ್ಳಸಾಗಣೆಯ ಪ್ರಮಾಣ ಹೆಚ್ಚಾಗುತ್ತಲೇ ಇದೆ ಎಂದೂ ವರದಿ ಹೇಳಿದೆ.

ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಈ ಜಾಲ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕಾನೂನು ದುರ್ಬಲವಾಗಿದ್ದಾಗ, ನಾಗರಿಕರಿಗೆ ಅಪರಾಧಗಳಿಂದ ಅತಿ ಕಡಿಮೆ ರಕ್ಷಣೆ ಇದ್ದಂತಹ ಪರಿಸ್ಥಿತಿಯಲ್ಲಿ ಈ ಜಾಲ ಬೃಹದಾಕಾರವಾಗಿ ಬೆಳೆದಿದೆ. ಶಸ್ತ್ರಾಸ್ತ್ರ ಪಡೆಗಳು ಮತ್ತು ಕ್ರಿಮಿನಲ್‌ಗಳು ಈ ಪರಿಸ್ಥಿತಿಯ ಲಾಭ ಪಡೆದು ಮಾನವ ಕಳ್ಳಸಾಗಣೆಗೆ ಕೈ ಹಾಕಿದ್ದಾರೆ. ಅಲ್ಲದೆ, ಮಧ್ಯಪ್ರಾಚ್ಯದ ನಿರಾಶ್ರಿತರ ಶಿಬಿರಗಳಲ್ಲಿನ ಬಾಲಕಿಯರು ಮತ್ತು ಮಹಿಳೆಯರನ್ನು ಅವರ ಒಪ್ಪಿಗೆಯಿಲ್ಲದೆ ಮದುವೆಯಾಗುವ ಕ್ರಿಮಿನಲ್‌ಗಳು ನಂತರ ಅವರನ್ನು ನೆರೆಹೊರೆಯ ರಾಷ್ಟ್ರಗಳಿಗೆ ಲೈಂಗಿಕ ಉದ್ದೇಶಕ್ಕೆ ಸಾಗಣೆ ಮಾಡುತ್ತಾರೆ ಎಂದು ವರದಿ ಹೇಳಿದೆ.

‘ಮಾನವ ಕಳ್ಳಸಾಗಣೆ ತಡೆಯಲು  ಎಲ್ಲ ರಾಷ್ಟ್ರಗಳು ಒಗ್ಗೂಡಿ ಪರಸ್ಪರ ತಾಂತ್ರಿಕ ಸಹಕಾರ ನೀಡಬೇಕಾದ ಅಗತ್ಯವಿದೆ’ ಎಂದೂ ವರದಿ ಸಲಹೆ ಮಾಡಿದೆ.

“ಮಾನವ ಕಳ್ಳಸಾಗಣೆಯು ಭಯಾನಕ ಸ್ವರೂಪ ಪಡೆದುಕೊಂಡಿದೆ. ಶಸ್ತ್ರಾಸ್ತ್ರ ಪಡೆಗಳು ಈ ಜಾಲದ ಸಂತ್ರಸ್ತರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.”
                – ಯೂರಿ ಫೆಡೊಟೊವ್‌, ಯುಎನ್‌ಒಡಿಸಿ ಕಾರ್ಯನಿರ್ವಾಹಕ ನಿರ್ದೇಶಕ