ಮಾಣಿಪ್ಪಾಡಿ ವರದಿ ಮಂಡಿಸಿ: ಹೈಕೋರ್ಟ್

0
510

ವಕ್ಫ್‌ ಮಂಡಳಿ ಸ್ಥಿರಾಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಅಂದಿನ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ವರದಿಯನ್ನು ಪ್ರಸಕ್ತ ವಿಧಾನಮಂಡಲ ಅಧಿವೇಶನ ಅಥವಾ 2019ರ ಸಾಲಿನ ಅಧಿವೇಶನದಲ್ಲಿ ಮಂಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.

ಬೆಂಗಳೂರು: ವಕ್ಫ್‌ ಮಂಡಳಿ ಸ್ಥಿರಾಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಅಂದಿನ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ವರದಿಯನ್ನು ಪ್ರಸಕ್ತ ವಿಧಾನಮಂಡಲ ಅಧಿವೇಶನ ಅಥವಾ 2019ರ ಸಾಲಿನ ಅಧಿವೇಶನದಲ್ಲಿ ಮಂಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರಾವಲೋಕನ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.

‘ವರದಿಯನ್ನು 2016ರ ಫೆಬ್ರುವರಿಯಲ್ಲಿ ಮಂಡಿಸಲಾಗುವುದು’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ  ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಇನ್ನೂ ಮಂಡಿಸಿಲ್ಲ’ ಎಂದು ಆರೋಪಿಸಿ ಮಾಜಿ ಸಚಿವ ಎಸ್.ಕೆ.ಕಾಂತಾ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಏತನ್ಮಧ್ಯೆ ರಾಜ್ಯ ಸರ್ಕಾರ ಪುನರಾವಲೋಕನ ಅರ್ಜಿ ಸಲ್ಲಿಸುವ ಮೂಲಕ, ‘ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಕಾಯ್ದೆ ಕಲಂ 10ರ (2) ಪ್ರಕಾರ ಆಯೋಗದ ಶಿಫಾರಸುಗಳನ್ನು ಮಾತ್ರ ಸದನದಲ್ಲಿ ಮಂಡಿಸಬೇಕು ಎಂದು ತಿಳಿಸುತ್ತದೆ. ಆದ್ದರಿಂದ ಈ ಹಿಂದೆ ನೀಡಿರುವ ಆದೇಶವನ್ನು ತಿದ್ದುಪಡಿ ಮಾಡಬೇಕು’ ಎಂದು ಕೋರಿತ್ತು.

ಇದಿಗ ಈ ಅರ್ಜಿಯನ್ನು ವಜಾ ಮಾಡಿರುವ ನ್ಯಾಯಪೀಠ, ‘ಮೆರಿಟ್ ಮೇಲೆ ಈ ಅರ್ಜಿ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಜ್ಯದಾದ್ಯಂತ ವಕ್ಫ್‌ ಮಂಡಳಿ ಸ್ಥಿರಾಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿ 2012ರ ಮಾರ್ಚ್ 26ರಂದು ಅಂದಿನ ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ್ದರು.

ತೀರ್ಪಿಗೆ ಪ್ರತಿಕ್ರಿಯಿಸಿದ ಅನ್ವರ್‌ ಮಾಣಿಪ್ಪಾಡಿ, ‘ಕಳೆದ ಏಳು ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಈಗ ಅಂತ್ಯ ಕೂಡಿ ಬಂದಿದೆ. ಸರ್ಕಾರ ತಡ ಮಾಡದೆ ವರದಿ ಮಂಡಿಸಬೇಕು. ಸತ್ಯ ಏನೆಂಬುದು ಜನಕ್ಕೆ ಗೊತ್ತಾಗಬೇಕು ಎಂಬುದೇ ನನ್ನ ಕೋರಿಕೆ’ ಎಂದರು.

ಕೇವಿಯಟ್ ಸಲ್ಲಿಕೆ

ವಿಭಾಗೀಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದೆಂಬ ನಿರೀಕ್ಷೆಯಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಕೇವಿಯಟ್‌ ಅರ್ಜಿ ಸಲ್ಲಿಸಲಿದ್ದಾರೆ. ಈ ವಿಷಯವನ್ನು ಅರ್ಜಿದಾರರ ಪರ ವಾದ ಮಂಡಿಸಿರುವ ಹಿರಿಯ ವಕೀಲ ಎಸ್‌.ಶ್ರೀವತ್ಸ ಅವರು ಬುಧವಾರ ‘ಪ್ರಜಾವಾಣಿ‘ಗೆ ತಿಳಿಸಿದರು.

ಈ ವಿಷಯದಲ್ಲಿ ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದು ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ.

– ಉದಯ ಹೊಳ್ಳ (ಅಡ್ವೊಕೇಟ್ ಜನರಲ್‌)