ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ 114ನೇ ಜಯಂತಿ: ದೇಶದ ಗೌರವ ನಮನ

0
955

ಇಂದು(ಅಕ್ಟೋಬರ್ 2) ದೇಶ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ 114ನೇ ಜನ್ಮದಿನವನ್ನಾರಿಸುತ್ತಿದೆ. ತದ ನಿಮಿತ್ತ ಹಾಲಿ ಪ್ರಧಾನಿ ನರೇಂದ್ರ ಮೋದಿ ವಿಜಯ್ ಘಾಟ್‌ಗೆ ತೆರಳಿ ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಿದರು.

ಹೊಸದಿಲ್ಲಿ: ಇಂದು(ಅಕ್ಟೋಬರ್ 2) ದೇಶ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ 114ನೇ ಜನ್ಮದಿನವನ್ನಾರಿಸುತ್ತಿದೆ. ತದ ನಿಮಿತ್ತ ಹಾಲಿ ಪ್ರಧಾನಿ ನರೇಂದ್ರ ಮೋದಿ ವಿಜಯ್ ಘಾಟ್‌ಗೆ ತೆರಳಿ ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಿದರು.

ಬಳಿಕ ಅವರನ್ನು ಸ್ಮರಿಸಿ ಟ್ವೀಟ್ ಮಾಡಿರುವ ಪ್ರಧಾನಿ, ಶಾಸ್ತ್ರೀ ಸೌಮ್ಯ-ಧೀಮಂತ ವ್ಯಕ್ತಿತ್ವ, ಕೌಶಲ್ಯಪೂರ್ಣ ನಾಯಕತ್ವ ಮತ್ತು ಧೈರ್ಯದ ಸಂಕೇತ ಎಂದಿದ್ದಾರೆ. 

ಶಾಸ್ತ್ರಿಯವರು ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯ ಮೊಘಲ್‌ಸರಾಯ್‌ನಲ್ಲಿ 1904 ಅಕ್ಟೋಬರ್‌ 2ರಂದು ಜನಿಸಿದರು. ಗಾಂಧಿ ಜಯಂತಿ ದಿನದಂದೇ ಶಾಸ್ತ್ರಿಯವರ ಜನ್ಮ ದಿನಾಚರಣೆ ಆಚರಿಸಲಾಗುತ್ತದೆ. ಅವರ ತಂದೆ ಶಾರದಾ ಪ್ರಸಾದ್‌ ಮತ್ತು ತಾಯಿ ರಾಮದುಲಾರಿ ದೇವಿ. ಶಾಸ್ತ್ರಿಯವರು ಶಾಲೆಯನ್ನು ತೊರೆದು 1920ರಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಅಹಿಂಸಾತ್ಮಕ ಸ್ವಾತಂತ್ಯ ಚಳವಳಿಯಲ್ಲಿ ಭಾಗವಹಿಸಿ. ನಮ್ಮ ದೇಶದ ಸ್ವಾತಂತ್ಯಕ್ಕಾಗಿ ಶ್ರಮಿಸಿದರು. 

ಲಾಲ್‌ ಬಹಾದ್ದೂರ ಶಾಸ್ತ್ರಿ ಗಾಂಧಿ ತತ್ವಗಳಲ್ಲಿ ನಂಬಿಕೆ ಇಟ್ಟ ಸ್ವಾತಂತ್ರ್ಯ ಸೇನಾನಿಯಾಗಿದ್ದರು. ಈ ದೇಶ ಕಂಡ ಸರಳ ಹಾಗೂ ಸಜ್ಜನ ಅತ್ಯುತ್ತಮ ಪ್ರಧಾನಿ. ಮೌಲ್ಯ ಬದ್ಧ ರಾಜಕಾರಣಕ್ಕೆ, ಪ್ರಾಮಾಣಿಕತೆಗೆ ಅವರು ಹೆಸರುವಾಸಿಯಾಗಿದ್ದರು. ತನ್ನ ಅಚಲ ನಿರ್ಧಾರ, ಅದಮ್ಯ ಸಮಯ ಪ್ರಜ್ಞೆ, ಆಗಾಧ ಅರಿವು ಇವುಗಳಿಂದ ಅಧಿಕಾರದುದ್ದಕ್ಕೂ ಎದುರಾದ ಎಲ್ಲ ರಾಷ್ಟ್ರೀಯ, ರಾಜಕೀಯ ವಿಪ್ಲವಗಳನ್ನು ಸಮರ್ಥವಾಗಿ ನಿಭಾಯಿಸಿದರು. ದೇಶದ ಆರ್ಥಿಕ ಹಾಗೂ ಸಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದರು. ‘ಭಾರತದ ಸಮಗ್ರತೆ ಹಾಗೂ ರಾಷ್ಟ್ರ ಧ್ವಜದ ಗೌರವ ಕಾಪಾಡಲು ನಮ್ಮ ಬದುಕಿನ ಕೊನೆ ಕ್ಷ ಣದ ವರೆಗೂ ಹೋರಾಡುತ್ತೇವೆ. ಈ ವಿಷಯದಲ್ಲಿ ನಾವೂ ಸಾವಿಗೂ ಅಂಜುವುದಿಲ್ಲ’, ಎನ್ನುತ್ತಿದ್ದರು. 

1964ರಲ್ಲಿ ಅಂದಿನ ಪಂಡಿತ್‌ ಜವಾಹರ್‌ಲಾಲ್‌ ನೆಹರೂ ಹಠಾತ್‌ ನಿಧನಗೊಂಡಾಗ ಭಾರತದ ಮುಂದೆ ಗೊಂದಲವೇ ಇರದ ಆಯ್ಕೆಯಾಗಿ ಕಂಡದ್ದು ಲಾಲ್‌ ಬಹದ್ದೂರ್‌ ಶಾಸ್ತ್ರಿ. ಅಂತಯೇ ಕಾಂಗ್ರೆಸ್‌ ಪಕ್ಷ ಅವರನ್ನು ಪ್ರಧಾನಿ ಪೀಠದಲ್ಲಿ ಕೂರಿಸಿತು. ಆದರೆ ಅವರ ಪಾಲಿಗೆ ಅದು ಸಂಭ್ರಮದ ಕಾಲವಾಗಿರಲಿಲ್ಲ. ಬದಲಿಗೆ ವ್ಯಂಗ್ಯದ ನಗೆಬೀರುತ್ತಿದ್ದ ಸಾಲು ಸಾಲು ಸವಾಲು ಎದುರಿಸಬೇಕಾದ ಕ್ಲಿಷ್ಟತೆ. ಅವರು ಧೃತಿಗೆಡಲಿಲ್ಲ. ಮೇಲ್ನೋಟಕ್ಕೆ ಅತಿ ಮೃದು ಧೋರಣೆಯ ವ್ಯಕ್ತಿಯಂತೆ ಕಾಣಿಸುತ್ತಿದ್ದ ಶಾಸ್ತ್ರಿಯವರು ಆಂತರ್ಯದಲ್ಲಿ ವಜ್ರ ಕಾಠಿಣ್ಯ ರೂಢಿಸಿಕೊಂಡಿದ್ದರು. 

‘ಜೈವಾನ್‌ ಜೈ ಕಿಸಾನ್‌’ ಎಂಬುದು ಅವರ ಪ್ರಮುಖ ಪ್ರಸಿದ್ಧ ಘೋಷವಾಕ್ಯವಾಗಿದೆ. ಅವರು ಕೊನೆವರೆಗೂ ಸರಳ ಖಾದಿಧಾರಿಯಾಗಿದ್ದು ಸ್ವತಃ ನೂಲುತ್ತಿದ್ದರು. ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ಜನವರಿ 11, 1966ರಲ್ಲಿ ಶಾಸ್ತ್ರೀಜಿ ಅಕಾಲಿಕವಾಗಿ ಸಾವನ್ನಪ್ಪಿದರು. ಚಿಕ್ಕ ದೇಹ ,ದೊಡ್ಡ ಆದರ್ಶ, ಮೆದು ದನಿ, ಉಗ್ರ ರಾಷ್ಟ್ರ ಭಕ್ತಿ, ದೇಶದ ಪ್ರಧಾನಿಯಾದರೂ ಸರಳತೆ ಬಿಡದ ವ್ಯಕಿತ್ವ, ಪ್ರಾಮಾಣಿಕತೆಯನ್ನೇ ಜೀವಾಳವಾಗಿಸಿಕೊಂಡು ಬದುಕಿದ ಶಾಸ್ತ್ರೀಜಿಯವರ ಆದರ್ಶ ಸರ್ವರಿಗೂ ಅನುಕರಣೀಯ.