ಮಾಜಿ ಕ್ರಿಕೆಟಿಗ, ಶ್ರೀಲಂಕದ ಪೆಟ್ರೋಲಿಯಂ ಮಂತ್ರಿ ರಣತುಂಗ ಬಂಧನ

0
244

ಮಂತ್ರಿ ಸ್ಥಾನ ಹೋದ ನಂತರವೂ ಕಚೇರಿಗೆ ಪ್ರವೇಶಿಸಲೆತ್ನಿಸಿದ ಮಾಜಿ ಕ್ರಿಕೆಟಿಗ, ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗ ಅವರಿಗೆ ಎದುರಾದ ಪ್ರತಿಭಟನೆಯನ್ನು ಹತ್ತಿಕ್ಕಲು ಅವರ ಗನ್​ಮನ್​ಗಳು ಹಾರಿಸಿದ ಗುಂಡಿಗೆ ವ್ಯಕ್ತಿಯೊಬ್ಬ ಬಲಿಯಾದ ಪ್ರಕರಣ ಸಂಬಂಧಿಸಿದಂತೆ ಶ್ರೀಲಂಕ ಪೊಲೀಸರು ರಣತುಂಗಾ ಅವರನ್ನು ಸೋಮವಾರ ಬಂಧಿಸಿದ್ದಾರೆ.

ಕೊಲೊಂಬೊ (ಶ್ರೀಲಂಕ): ಮಂತ್ರಿ ಸ್ಥಾನ ಹೋದ ನಂತರವೂ ಕಚೇರಿಗೆ ಪ್ರವೇಶಿಸಲೆತ್ನಿಸಿದ ಮಾಜಿ ಕ್ರಿಕೆಟಿಗ, ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗ ಅವರಿಗೆ ಎದುರಾದ ಪ್ರತಿಭಟನೆಯನ್ನು ಹತ್ತಿಕ್ಕಲು ಅವರ ಗನ್​ಮನ್​ಗಳು ಹಾರಿಸಿದ ಗುಂಡಿಗೆ ವ್ಯಕ್ತಿಯೊಬ್ಬ ಬಲಿಯಾದ ಪ್ರಕರಣ ಸಂಬಂಧಿಸಿದಂತೆ ಶ್ರೀಲಂಕ ಪೊಲೀಸರು ರಣತುಂಗಾ ಅವರನ್ನು ಸೋಮವಾರ ಬಂಧಿಸಿದ್ದಾರೆ.

“ಗುಂಡು ಹಾರಿಸಿ ವ್ಯಕ್ತಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ರಣತುಂಗ ಅವರನ್ನು ಕೊಲೊಂಬೊ ಅಪರಾಧ ವಿಭಾಗ ಬಂಧಿಸಿದೆ. ಅವರನ್ನು ಶೀಘ್ರವೇ ನ್ಯಾಯಾಯಲಕ್ಕೆ ಹಾಜರುಪಡಿಸಲಾಗುವುದು,” ಎಂದು ಪೊಲೀಸ್​ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಶ್ರೀಲಂಕ ಅಧ್ಯಕ್ಷ ಮೈತ್ರಿಪಾಲ ಸರಿಸೇನಾ ಅವರು ಕಳೆದ ಶುಕ್ರವಾರ ಮಹಿಂದಾ ರಾಜಪಕ್ಸೆ ಅವರನ್ನು ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿದ್ದೂ ಅಲ್ಲದೆ, ಈ ಹಿಂದಿನ ಪ್ರಧಾನಿ ರನಿಲ್​ ವಿಕ್ರಮಸಿಂಘೆ ಅವರ ಸರ್ಕಾರದ ಸಚಿವ ಸಂಪುಟವನ್ನು ವಿಸರ್ಜನೆ ಮಾಡಿದ್ದರು. ಅದಾದ ನಂತರ ನೂತನ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರು ಹಿಂದಿನ ಸಚಿವರ ಕಚೇರಿಗಳಿಗೆ ಅಡ್ಡಲಾಗಿ ನಿಂತು ಸಚಿವರ ಪ್ರವೇಶವನ್ನು ತಡೆಯಲಾರಂಭಿಸಿದರು.

ಹೀಗಿರುವಾಗಲೇ ಸಚಿವ ರಣತುಂಗ ಅವರು ಕಚೇರಿ ಪ್ರವೇಶಿಸುವ ವೇಳೆ ಉಂಟಾದ ಉದ್ವಿಗ್ನ ಪರಿಸ್ಥಿತಿಯನ್ನು ತಹಬದಿಗೆ ತರಲು ರಣತುಂಗ ಅವರ ಭದ್ರತಾ ಸಿಬ್ಬಂದಿ ಹಾರಿಸಿದ ಗುಂಡಿಗೆ ವ್ಯಕ್ತಿಯೊಬ್ಬ ಪ್ರಾಣಬಿಟ್ಟಿದ್ದ. ಈ ಪ್ರಕರಣ ಈಗ ರಣತುಂಗ ಅವರನ್ನು ಬಂಧನಕ್ಕೀಡು ಮಾಡಿದೆ.