ಮಾಜಿ ಕ್ರಿಕೆಟಿಗ “ಗೌತಮ್ ಗಂಭೀರ್” ರಾಜಕೀಯ ಇನಿಂಗ್ಸ್‌ ಶುರು

0
23

ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ರಾಜಕೀಯ ಜೀವನದ ಇನಿಂಗ್ಸ್‌ ಅನ್ನು
ಮೇ 23 ರ ಗುರುವಾರದಿಂದ ಆರಂಭಿಸಿದರು. ಇನ್ನೊಂದೆಡೆ ಒಲಿಂಪಿಯನ್ ಮತ್ತು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೂಡ ಸತತ ಎರಡನೇ ಬಾರಿಗೆ ಲೋಕಸಭೆ ಪ್ರವೇಶಿಸಿದರು.

ನವದೆಹಲಿ/ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ರಾಜಕೀಯ ಜೀವನದ  ಇನಿಂಗ್ಸ್‌ ಅನ್ನು ಗುರುವಾರದಿಂದ ಆರಂಭಿಸಿದರು. ಇನ್ನೊಂದೆಡೆ ಒಲಿಂಪಿಯನ್ ಮತ್ತು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೂಡ ಸತತ ಎರಡನೇ ಬಾರಿಗೆ ಲೋಕಸಭೆ ಪ್ರವೇಶಿಸಿದರು.

ಈ ಬಾರಿಯ ಲೋಕಸಭಾ ಚುನಾ ವಣೆಯಲ್ಲಿ ದೇಶದ ಆರು ಪ್ರಮುಖ ಕ್ರೀಡಾಪಟುಗಳು ಕಣಕ್ಕಿಳಿದಿದ್ದರು. ಅದ ರಲ್ಲಿ ಇಬ್ಬರು ಮಾತ್ರ ಗೆದ್ದಿದ್ದಾರೆ. ಉಳಿದ ನಾಲ್ವರು ಸೋಲನುಭವಿಸಿದ್ದಾರೆ.

ಪೂರ್ವ ದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗಂಭೀರ್ ಅವರು ಕಾಂಗ್ರೆಸ್‌ನ ಅರವಿಂದರ್ ಸಿಂಗ್ ಲವ್ಲಿ ಅವರನ್ನು ಮಣಿಸಿದರು.  ಹೋದ ಡಿಸೆಂಬರ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದ ಗಂಭೀರ್ ರಾಜಕೀಯದ ಅಂಗಳಕ್ಕೆ ಧುಮುಕಿದ್ದರು. ಮಾರ್ಚ್‌ ತಿಂಗಳಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು.  ಸುಮಾರು ಎರಡು ವರ್ಷಗಳಿಂದ ಸೇನೆ, ರಾಷ್ಟ್ರೀಯತೆ ಮತ್ತು ಹಿಂದುತ್ವದ ಪರವಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಾಕುವ ಮೂಲಕ ಚರ್ಚೆಗಳನ್ನು ಹುಟ್ಟುಹಾಕಿದ್ದರು. ಆ ಮೂಲಕ ತಮ್ಮದೇ ಆದ ಅಭಿಮಾನಿಗಳ ಸಮೂಹವನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆ ಮೂಲಕ ರಾಜಕೀಯ ಇನಿಂಗ್ಸ್‌ಗಾಗಿ ‘ನೆಟ್‌ ಪ್ರಾಕ್ಟಿಸ್‌’ ಮಾಡಿದ್ದರು. 

ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಲವ್ಲಿ  ತೀವ್ರ ಸ್ಪರ್ಧೆ ಒಡ್ಡಿದ್ದರು. ಆದರೆ, ಅವರಿಗಿಂತ ದುಪ್ಟಟ್ಟು ಮತಗಳನ್ನು ಗಳಿಸಿದ ಗೌತಮ್ ಗೆದ್ದರು. ಆಮ್‌ ಆದ್ಮಿ ಪಕ್ಷದ ಅತೀಶಿ ಮರೀನಾ ಮೂರನೇ ಸ್ಥಾನ ಪಡೆದರು.  ಬಿಎಸ್‌ಪಿಯ ಸಂಜಯ್ ಕುಮಾರ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.

‘ಗುರಿ’ ಸಾಧಿಸಿದ ರಾಥೋಡ್: 2004ರಲ್ಲಿ ಅಥೆನ್ಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಪುರುಷರ ಡಬಲ್‌ ಟ್ರ್ಯಾಪ್‌ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್ ಎರಡನೇ ಬಾರಿ ಚುನಾವಣೆಯಲ್ಲಿ ಗೆದ್ದರು. ಕೆಲವು ತಿಂಗಳುಗಳ ಹಿಂದೆ ಅವರು ‘ಫಿಟ್‌ನೆಸ್‌ ಚಾಲೆಂಜ್’ ಅಭಿಯಾನ ಹುಟ್ಟುಹಾಕಿ ಗಮನ ಸೆಳೆದಿದ್ದರು.

2014ರ ಚುನಾವಣೆಯಲ್ಲಿಯೂ ಅವರು ಬಿಜೆಪಿ ಅಭ್ಯರ್ಥಿಯಾಗಿ ಜೈಪುರ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು.   ಈ ಬಾರಿ ಅವರಿಗೆ ಒಲಿಂಪಿಯನ್ ಅಥ್ಲೀಟ್ ಕೃಷ್ಣಾ ಪೂನಿಯಾ ಅವರು ಸ್ಪರ್ಧಿಯಾಗಿದ್ದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೃಷ್ಣಾ ಅವರು ಸೋಲನುಭವಿಸಿದರು. ಡಿಸ್ಕಸ್ ಥ್ರೋ ಪಟು ಕೃಷ್ಣಾ  2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು.  2006 ಮತ್ತು 2010ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2010ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರಿಗೆ ಈಗ 42 ವರ್ಷ.
 
ವಿಜೇಂದರ್‌, ಕೀರ್ತಿಗೆ ಸೋಲು: ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಮತ್ತು ವೃತ್ತಿಪರ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್,  ಹಿರಿಯ ಕ್ರಿಕೆಟಿಗ ಕೀರ್ತಿ ಆಜಾದ್ ಮತ್ತು ಭಾರತ ಫುಟ್‌ಬಾಲ್ ತಂಡದ ಮಾಜಿ ಗೋಲ್‌ಕೀಪರ್ ಕಲ್ಯಾಣ್ ಚೌಬೆ ಅವರು ಸೋಲಿನ ಕಹಿ ಅನುಭವಿಸಿದರು.

ದಕ್ಷಿಣ ದೆಹಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಜೇಂದರ್ ಅವರು ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಸೋತರು. ವಿಜೇಂದರ್ ಅವರು ಬೀಜಿಂಗ್ ಒಲಿಂಪಿಕ್ಸ್‌ (2008) ನಲ್ಲಿ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2009ರಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಮತ್ತು 2010ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದರು.

ಹರಿಯಾಣದ ವಿಜೇಂದರ್ ಅವರಿಗೆ ಈಗ 33 ವರ್ಷ. ಅವರು ಸದ್ಯ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಸತತ ಹತ್ತು ಪಂದ್ಯಗಳಲ್ಲಿ ಜಯಿಸಿದ ದಾಖಲೆಯೂ ಅವರದ್ದಾಗಿದೆ.

1980ರಿಂದ 1986ರವರೆಗೆ ಭಾರತ ಕ್ರಿಕೆಟ್ ತಂಡದಲ್ಲಿ  ಆಲ್‌ರೌಂಡರ್ ಕೀರ್ತಿ ಆಜಾದ್ ಆಡಿದ್ದರು. ಅವರ ತಂದೆ ಭಾಗವತ್ ಝಾ ಆಜಾದ್ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಜಾರ್ಖಂಡ್‌ನ ಧನಬಾದ್‌ನಲ್ಲಿ 2014ರಲ್ಲಿ ಗೆದ್ದಿದ್ದ ಕೀರ್ತಿ ಆಜಾದ್ ಅವರು ಗೆದ್ದಿದ್ದರು. ಈಗ ಅದೇ ಕ್ಷೇತ್ರದಲ್ಲಿ ಸೋತಿದ್ದಾರೆ.

ಪಶ್ಚಿಮ ಬಂಗಾಳದ ಕೃಷ್ಣನಗರದಿಂದ ಬಿಜಿಪಿ ಅಭ್ಯರ್ಥಿಯಾಗಿದ್ದ ಗೋಲ್‌ಕೀಪರ್ ಕಲ್ಯಾಣ್ ಚೌಬೆ ಅವರು ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಮಹುವಾ ಮೊಯಿತ್ರಾ ಅವರ ವಿರುದ್ಧ ಸೋತರು.

ಗೌತಮ್ ಗಂಭೀರ್ ಕುರಿತು ಕೆಲ ಮಾಹಿತಿ

ಜನನ: ಅಕ್ಟೋಬರ್ 14, 1981 (ವಯಸ್ಸು 37) ನವದೆಹಲಿ

ಊರು: ದೆಹಲಿ

ತಂದೆ: ದೀಪಕ್ ಗಂಭೀರ್

ತಾಯಿ: ಸೀಮಾ ಗಂಭೀರ್

ಹೆಂಡತಿ: ನತಾಶಾ ಜೈನ್

ಮಗಳು: ಆಜೀನ್ ಗಂಭೀರ್.

ಕ್ರಿಕೆಟ್: ಎಡಗೈ ಬ್ಯಾಟ್ಸ್‌ಮನ್

ಟೆಸ್ಟ್‌ ಪಂದ್ಯ: 58      ರನ್: 4154    ಶ್ರೇಷ್ಠ: 206  ಶತಕ: 09  ದ್ವಿಶತಕ: 01  ಅರ್ಧಶತಕ: 22

ಏಕದಿನ ಪಂದ್ಯ: 147  ರನ್: 5238    ಶ್ರೇಷ್ಠ: 150  ಶತಕ: 11   ಅರ್ಧಶತಕ: 34

ಟ್ವೆಂಟಿ–20 ಪಂದ್ಯ: 37 ರನ್: 932     ಶ್ರೇಷ್ಠ: 75   ಅರ್ಧಶತಕ: 07