ಮಹಿಳೆಯರ ವಿಶ್ವ ಟ್ವೆಂಟಿ–20 ಕ್ರಿಕೆಟ್‌:ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ

0
227

ಇಂಗ್ಲೆಂಡ್‌ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ ಆಟಗಾರ್ತಿಯರು ಮಹಿಳೆಯರ ವಿಶ್ವಕಪ್‌ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು.

ನಾರ್ತ್ ಸೌಂಡ್‌, ಆಂಟಿಗಾ (ಎಎಫ್‌ಪಿ): ಇಂಗ್ಲೆಂಡ್‌ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ ಆಟಗಾರ್ತಿಯರು ಮಹಿಳೆಯರ ವಿಶ್ವಕಪ್‌ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು.

ಇಲ್ಲಿನ ಸರ್‌. ವಿವಿಯನ್ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆಲ್‌ರೌಂಡರ್‌ ಆ್ಯಶ್ಲಿ ಗಾರ್ಡನರ್‌ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘ ಆಟ ಆಡಿ ಆಸ್ಟ್ರೇಲಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಯುವ ಲೆಗ್‌ ಸ್ಪಿನ್ನರ್‌ ಜಾರ್ಜಿಯಾ ವರೆಹಾಮ್‌ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ಎದುರಾಳಿಗಳನ್ನು 105 ರನ್‌ಗಳಿಗೆ ಕಟ್ಟಿ ಹಾಕಿದ ಆಸ್ಟ್ರೇಲಿಯಾ ನಂತರ 15.1 ಓವರ್‌ಗಳಲ್ಲಿ ಗುರಿ ಮುಟ್ಟಿತು. ಈ ಮೂಲಕ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. ತಲಾ ಒಂದೊಂದು ಬಾರಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಪ್ರಶಸ್ತಿ ಗೆದ್ದಿದೆ. ಉಳಿದ ಯಾವ ತಂಡವೂ ಇಲ್ಲಿಯ ವರೆಗೆ ಚಾಂಪಿಯನ್‌ ಆಗಲಿಲ್ಲ. ಭಾರತ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಮಣಿದು ಟೂರ್ನಿಯಿಂದ ಹೊರ ಬಿದ್ದಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ 18 ರನ್‌ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಯಾವ ಹಂತದಲ್ಲೂ ಪಂದ್ಯದ ಮೇಲೆ ಹಿಡಿತ ಸಾಧಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ್ತಿ ಡ್ಯಾನಿಯೆಲ್ ವ್ಯಟ್‌ (43; 37 ಎಸೆತ, 1 ಸಿಕ್ಸರ್‌, 5 ಬೌಂಡರಿ) ಮತ್ತು ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹಿದರ್‌ ನೈಟ್‌ (25) ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು.

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 29 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. 44 ರನ್‌ ಗಳಿಸಿದ್ದಾಗ ತಂಡದ ಎರಡನೇ ವಿಕೆಟ್ ಕೂಡ ಉರುಳಿತು. ಆದರೆ ಗಾರ್ಡನರ್ (33; 26 ಎ, 3 ಸಿ, 1 ಬೌಂ) ಮತ್ತು ನಾಯಕಿ ಮೆಗ್‌ಲ್ಯಾನಿಂಗ್‌ (28; 30; 3 ಬೌಂ) ಮೂರನೇ ವಿಕೆಟ್‌ಗೆ 62 ರನ್‌ ಜೋಡಿಸಿ ತಂಡವನ್ನು ಜಯದ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: 19.4 ಓವರ್‌ಗಳಲ್ಲಿ 105 (ಡ್ಯಾನಿಯೆಲ್ ವ್ಯಟ್‌ 43, ಹಿದರ್‌ ನೈಟ್‌ 25; ಮೆಗನ್ ಶುಟ್‌ 13ಕ್ಕೆ2, ಜಾರ್ಜಿಯಾ ವರೆಹಾಮ್‌ 11ಕ್ಕೆ2, ಆ್ಯಶ್ಲಿ ಗಾರ್ಡನರ್‌22ಕ್ಕೆ3) ಆಸ್ಟ್ರೇಲಿಯಾ: 15.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 106 (ಅಲಿಸಾ ಹೀಲಿ 22, ಬೆತ್ ಮೂನಿ 14, ಗಾರ್ಡನರ್ ಅಜೇಯ 33, ಮೆಗ್‌ಲ್ಯಾನಿಂಗ್‌ ಅಜೇಯ 28). ಫಲಿತಾಂಶ: ಆಸ್ಟ್ರೇಲಿಯಾಗೆ 8 ವಿಕೆಟ್‌ಗಳ ಜಯ; ಪ್ರಶಸ್ತಿ. ಪಂದ್ಯದ ಶ್ರೇಷ್ಠ ಆಟಗಾರ್ತಿ: ಆ್ಯಶ್ಲಿ ಗಾರ್ಡನರ್‌; ಸರಣಿಯ ಉತ್ತಮ ಆಟಗಾರ್ತಿ: ಅಲಿಸಾ ಹೀಲಿ (ಆಸ್ಟ್ರೇಲಿಯಾ).