ಮಹಿಳೆಯರ ಏಕದಿನ ರ‍್ಯಾಂಕಿಂಗ್‌: ಮತ್ತೆ ಅಗ್ರಸ್ಥಾನಕ್ಕೇರಿದ ಗೋಸ್ವಾಮಿ

0
638

ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ಆತಿಥೇಯರ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಭಾರತದ ಅನುಭವಿ ಬೌಲರ್‌ ಜೂಲನ್‌ ಗೋಸ್ವಾಮಿ ಐಸಿಸಿ ಮಹಿಳಾ ರ‍್ಯಾಂಕಿಂಗ್‌ನ ಏಕದಿನ ಬೌಲರ್‌ಗಳ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ದುಬೈ: ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ಆತಿಥೇಯರ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಭಾರತದ ಅನುಭವಿ ಬೌಲರ್‌ ಜೂಲನ್‌ ಗೋಸ್ವಾಮಿ ಐಸಿಸಿ ಮಹಿಳಾ ರ‍್ಯಾಂಕಿಂಗ್‌ನ ಏಕದಿನ ಬೌಲರ್‌ಗಳ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 

2017ರ ಫೆಬ್ರವರಿಯಲ್ಲಿ ಕೊನೆಯದಾಗಿ ಮೊದಲ ಸ್ಥಾನ ಅಲಂಕರಿಸಿದ್ದ 36 ವರ್ಷದ ಜೂಲನ್‌, ಮುಂಬಯಿನಲ್ಲಿ ನಡೆದ ಸರಣಿಯಲ್ಲಿ ಎಂಟು ವಿಕೆಟ್‌ ಉರುಳಿಸಿದ್ದರು. ಇವರ ನೆರವಿನಿಂದ ಭಾರತದ ತಂಡ ಕೂಡ ಎಂಟು ತಂಡಗಳ ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಇದು 2021ರ ಮಹಿಳಾ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಅವಕಾಶ ಕಲ್ಪಿಸಿದೆ. ಆತಿಥೇಯ ನ್ಯೂಜಿಲೆಂಡ್‌ ಜತೆಗೆ ಇತರ ಅಗ್ರ ನಾಲ್ಕು ತಂಡಗಳು ನೇರ ಅರ್ಹತೆ ಪಡೆಯುವ ಅವಕಾಶ ಹೊಂದಿವೆ. 

ಮತ್ತೊಂದು ಐಸಿಸಿ  ಮಹಿಳಾ ಚಾಂಪಿಯನ್‌ಷಿಪ್‌ ಸರಣಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ 3-0 ಅಂತರದಲ್ಲಿ ಸರಣಿ ಜಯಿಸಿರುವ ಆಸ್ಪ್ರೇಲಿಯಾ, 12 ಪಂದ್ಯಗಳಿಂದ 22 ಅಂಕ ಕಲೆಹಾಕಿದ್ದು ಮುಂಬರುವ ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.15 ಪಂದ್ಯಗಳನ್ನಾಡಿರುವ ಟೀಮ್‌ ಇಂಡಿಯಾ 16 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌ 15 ಪಂದ್ಯಗಳಿಂದ 14 ಅಂಕ ಹೊಂದಿದ್ದು, ನಂತರದ ಸ್ಥಾನ ಗಳಿಸಿದೆ. 

ಏಕದಿನದಲ್ಲಿ 218 ವಿಕೆಟ್‌ ಪಡೆದಿರುವ ಗೋಸ್ವಾಮಿ ಅತ್ಯಂತ ಯಶಸ್ವಿ ಬೌಲರ್‌ ಎನಿಸಿದ್ದು, ಅಗ್ರಸ್ಥಾನದಲ್ಲಿ ಅತ್ಯಧಿಕ ದಿನ ಇದ್ದ ದಾಖಲೆಗೆ ಸಮೀಪವಾಗಿದ್ದಾರೆ. ಸದ್ಯ 1873 ದಿನ ಮೊದಲ ಸ್ಥಾನದಲ್ಲಿರುವ ಗೋಸ್ವಾಮಿ, ಆಸ್ಪ್ರೇಲಿಯಾದ ವೇಗಿ ಕ್ಯಾಥ್ರಿನ್‌ ಫಿಟ್ಜ್‌ಪ್ಯಾಟ್ರಿಕ್‌(2113 ದಿನ) ನಂತರದ ಸ್ಥಾನ ಪಡೆದಿದ್ದಾರೆ.

ಈ ಮಧ್ಯೆ ಇಂಗ್ಲೆಂಡ್‌ ವಿರುದ್ಧ 8 ವಿಕೆಟ್‌ಗಳನ್ನು ಬಗಲಿಗೆ ಹಾಕಿಕೊಂಡ ಶಿಖಾ ಪಾಂಡೆ ಸಹ 12ನೇ ಸ್ಥಾನ ಬಡ್ತಿಯೊಂದಿಗೆ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ. 2010ರಲ್ಲಿ ಗೋಸ್ವಾಮಿ ಮತ್ತು ರುಮೇಲಿ ಧಾರ್‌ ಬಳಿಕ ಭಾರತದ ಇಬ್ಬರು ಬೌಲರ್‌ಗಳು ಅಗ್ರ ಐವರಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು. 

ಐಸಿಸಿ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ 837 ರನ್‌ ಕಲೆಹಾಕಿರುವ ಸ್ಟೈಲಿಶ್ ಎಡಗೈ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನ ಬಾಟರ್‌ಗಳ ವಿಭಾಗದಲ್ಲಿ 797ಅಂಕದೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. 2012ರ ಮಾರ್ಚ್‌ನಲ್ಲಿ ಭಾರತದ ಮಿಥಾಲಿ ರಾಜ್‌ ಮತ್ತು ಗೋಸ್ವಾಮಿ ಕೊನೆಯದಾಗಿ ಅಗ್ರಸ್ಥಾನ ಪಡೆದಿದ್ದರು.