ಮಹಿಳಾ ಸ್ಯಾಫ್ ಪುಟ್ ಬಾಲ್ ಚಾಂಪಿಯನ್‌ಷಿಪ್‌: ಭಾರತ ತಂಡಕ್ಕೆ ಚಾಂಪಿಯನ್‌ ಪಟ್ಟ

0
322

ಸ್ಯಾಫ್ ಚಾಂಪಿಯನ್‌ಷಿಪ್‌: ಟೂರ್ನಿಯ ಉದ್ದಕ್ಕೂ ಸಾಮರ್ಥ್ಯ ಮೆರೆದ ದಾಲಿಮಾ ಚಿಬ್ಬೇರ್ ಮತ್ತು ಡಂಗ್ಮಿ ಗ್ರೇಸ್ ಮತ್ತೊಮ್ಮೆ ತಮ್ಮ ಕಾಳ್ಚಳಕ ಪ್ರದರ್ಶಿಸಿದರು.ಇದರ ಪರಿಣಾಮವಾಗಿ ಭಾರತದ ಮಹಿಳಾ ತಂಡ ಆತಿಥೇಯ ನೇಪಾಳವನ್ನು ಮಣಿಸಿ ಪ್ರಶಸ್ತಿ ಗೆದ್ದಿತು.

ಬಿರಾತ್‌ನಗರ (ಪಿಟಿಐ): ಟೂರ್ನಿಯ ಉದ್ದಕ್ಕೂ ಸಾಮರ್ಥ್ಯ ಮೆರೆದ ದಾಲಿಮಾ ಚಿಬ್ಬೇರ್ ಮತ್ತು ಡಂಗ್ಮಿ ಗ್ರೇಸ್ ಮತ್ತೊಮ್ಮೆ ತಮ್ಮ ಕಾಳ್ಚಳಕ ಪ್ರದರ್ಶಿಸಿದರು.

ಇದರ ಪರಿಣಾಮವಾಗಿ ಭಾರತದ ಮಹಿಳಾ ತಂಡ ಆತಿಥೇಯ ನೇಪಾಳವನ್ನು ಮಣಿಸಿ ಪ್ರಶಸ್ತಿ ಗೆದ್ದಿತು.

ಇಲ್ಲಿನ ಸಾಹಿದ್ ರಂಗಶಾಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸ್ಯಾಫ್‌ ಮಹಿಳೆಯರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಎದುರಾಳಿಗಳನ್ನು 3–1ರಿಂದ ಸೋಲಿಸಿದ ಭಾರತ ಸತತ ಐದನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಈ ಜಯದೊಂದಿಗೆ ಭಾರತ ನಿರಂತರ 23 ಪಂದ್ಯಗಳನ್ನು ಗೆದ್ದ ಸಾಧನೆಯನ್ನೂ ಮಾಡಿತು.

ದಾಲಿಮಾ ಚಿಬ್ಬೇರ್ ಮತ್ತು ಡಂಗ್ಮಿ ಗ್ರೇಸ್ ಮತ್ತು ಬದಲಿ ಆಟಗಾರ್ತಿಯಾಗಿ ಕಣಕ್ಕೆ ಇಳಿದ ಅಂಜು ತಮಂಗ್‌ ಭಾರತದ ಪರ ಗೋಲು ಗಳಿಸಿದರು. 

ತವರಿನ ಪ್ರೇಕ್ಷಕರ ಬೆಂಬಲ ದೊಂದಿಗೆ ಕಣಕ್ಕೆ ಇಳಿದ ನೇಪಾಳ ಆರಂಭದಲ್ಲಿ ಭಾರತಕ್ಕೆ ಭಾರಿ ಪೈಪೋಟಿ ನೀಡಿತು.

ಆದರೆ ಛಲದಿಂದ ಕಾದಾಡಿದ ಭಾರತದ ಆಟಗಾರ್ತಿಯರು ಪಟ್ಟು ಬಿಡದೆ ತಿರುಗೇಟು ನೀಡಲು ಸಜ್ಜಾದರು. ಹೀಗಾಗಿ ತಂಡಕ್ಕೆ ಕೆಲವು ಉತ್ತಮ ಅವಕಾಶಗಳು ಲಭಿಸಿದವು. ಎದುರಾಳಿ ತಂಡದ ಮಂಜಲಿ ಕುಮಾರ್‌ ಸತತವಾಗಿ ಭಾರತದ ಆವರಣಕ್ಕೆ ನುಗ್ಗಿ ಆತಂಕ ಸೃಷ್ಟಿಸಿದರು. ಆದರೆ ನಾಯಕಿ ಮತ್ತು ಗೋಲ್‌ ಕೀಪರ್‌ ಅದಿತಿ ಚೌಹಾಣ್ ಅವರನ್ನು ವಂಚಿಸಿ ಗೋಲು ಗಳಿಸಲು ಮಂಜಲಿಗೆ ಸಾಧ್ಯವಾಗಲಿಲ್ಲ.

ಮೂರನೇ ನಿಮಿಷದಲ್ಲಿ ಭಾರತದ ಸಂಧ್ಯಾ ಎದುರಾಳಿ ಡಿಫೆಂಡರ್‌ಗಳನ್ನು ವಂಚಿಸಿ ಮುನ್ನುಗ್ಗಿದರು. ಕೊನೆಯ ಕ್ಷಣದಲ್ಲಿ ಚೆಂಡನ್ನು ಸಂಜುಗೆ ಪಾಸ್ ಮಾಡಿದರು. ಸಂಜು ಬಲವಾಗಿ ಒದ್ದರೂ ನೇಪಾಳದ ಗೋಲ್‌ಕೀಪರ್‌ ಅದನ್ನು ತಡೆದರು. ಮರು ಕ್ಷಣದಲ್ಲೇ ಸಾಬಿತ್ರ ಭಂಢಾರಿ ಭಾರತದ ಆವರಣದಲ್ಲಿ ಆಕ್ರಮಣಕ್ಕೆ ಮುಂದಾದರು. ಆದರೆ ಅವರ ಪ್ರಯತ್ನ ಫಲ ಕಾಣಲಿಲ್ಲ.

ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಎದುರು ಮೊದಲ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟ ಚಿಬ್ಬೇರ್ ಫೈನಲ್‌ನಲ್ಲೂ ಭಾರತದ ಖಾತೆ ತೆರೆದರು. 26ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್‌ನಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸಿದರು.

ಆರು ನಿಮಿಷಗಳ ನಂತರ ರತನ್‌ಬಾಲಾ ದೇವಿ ಅವರಿಗೆ ಗೋಲು ಗಳಿಸಲು ಉತ್ತಮ ಅವಕಾಶ ಲಭಿಸಿತ್ತು. ಆದರೆ ನೇಪಾಳ ಗೋಲ್‌ಕೀಪರ್‌ ಚೆಂಡನ್ನು ತಡೆದು ನಿಟ್ಟುಸಿರು ಬಿಟ್ಟರು. ಆದರೆ 34ನೇ ನಿಮಿಷದಲ್ಲಿ ಸಬಿತ್ರಾ ಗೋಲು ಗಳಿಸಿ ನೇಪಾಳಕ್ಕೆ ಸಮಬಲ ತಂದುಕೊಟ್ಟರು.

ಮತ್ತೆ ಆಕ್ರಮಣಕಾರಿ ಆಟ: ದ್ವಿತೀಯಾರ್ಧದಲ್ಲಿ ಭಾರತ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಸಂಜು ಮತ್ತು ರತನ್‌ಬಾಲಾ ದೇವಿ ಸತತವಾಗಿ ಅವಕಾಶಗಳನ್ನು ಸೃಷ್ಟಿಸಿದರು. 63ನೇ ನಿಮಿಷದಲ್ಲಿ ಗೋಲು ಗಳಿಸಿ ಗ್ರೇಸ್‌ ಮುನ್ನಡೆಯನ್ನು ತಂದುಕೊಟ್ಟರು. ಸಂಧ್ಯಾ ಬದಲಿಗೆ ಕಣಕ್ಕೆ ಇಳಿದ ಅಂಜು 78ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಭಾರತದ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.