ಮಹಿಳಾ ಕ್ರಿಕೆಟ್ ತಂಡಕ್ಕೆ 15ರ ಹರೆಯದ ಶೆಫಾಲಿ

0
18

ಹರಿಯಾಣದ 15 ವರ್ಷದ ಬ್ಯಾಟುಗಾರ್ತಿ ಶೆಫಾಲಿ ವರ್ಮ ಇದೇ ತಿಂಗಳು ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ.

ನವದೆಹಲಿ: ಹರಿಯಾಣದ 15 ವರ್ಷದ ಬ್ಯಾಟುಗಾರ್ತಿ ಶೆಫಾಲಿ ವರ್ಮ ಇದೇ ತಿಂಗಳು ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಒಂದೂವರೆ ದಶಕದಿಂದ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದ ಮಿಥಾಲಿ ರಾಜ್ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ ಬೆನ್ನಲ್ಲೇ ಕಿರಿಯ ಆಟಗಾರ್ತಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ.

ಐದು ಅಡಿ ಎತ್ತರದ ಶೆಫಾಲಿ ಈ ವರ್ಷ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಆಯ್ಕೆ ಸಮಿತಿ ಸದಸ್ಯರ ಗಮನಸೆಳೆದಿದ್ದರು. ವಿವಿಧ ವಯೋಮಿತಿ ವಿಭಾಗದಲ್ಲೂ ಉತ್ತಮ ನಿರ್ವಹಣೆ ನೀಡಿದ್ದರು. ಐದು ಪಂದ್ಯಗಳ ಟಿ20 ಸರಣಿಯ ಆರಂಭಿಕ 3 ಪಂದ್ಯಗಳಿಗಷ್ಟೇ ತಂಡ ಪ್ರಕಟಿಸಲಾಗಿದೆ. ಚುಟುಕು ಕ್ರಿಕೆಟ್​ನಿಂದ ಹಿಂದೆ ಸರಿದಿರುವ ಮಿಥಾಲಿ ರಾಜ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡ ಮುನ್ನಡೆಸಲಿದ್ದರೆ, ಹರ್ಮನ್ ಪ್ರೀತ್ ಕೌರ್ ಟಿ20 ನಾಯಕಿಯಾಗಿ ಮುಂದುವರಿದಿದ್ದಾರೆ.

ದೇಶೀಯ ಕ್ರಿಕೆಟ್​ನ 19 ಹಾಗೂ 23 ವಯೋಮಿತಿ ವಿಭಾಗದಲ್ಲಿ 150 ಸ್ಟ್ರೈಕ್ ರೇಟ್ ಹೊಂದಿರುವ ಶೆಫಾಲಿ, ಬಿರುಸಿನ ಬ್ಯಾಟಿಂಗ್ ಜತೆಗೆ ಸ್ಪಿನ್ ಬೌಲರ್ ಕೂಡ ಆಗಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿದ 2ನೇ ಕಿರಿಯ ಆಟಗಾರ್ತಿ ಎನಿಸಿದ್ದಾರೆ. ಇದಕ್ಕೂ ಮೊದಲು 1978ರಲ್ಲಿ ಗಾರ್ಗಿ ಬ್ಯಾನರ್ಜಿ 14 ವರ್ಷ 165 ದಿನದಲ್ಲೇ ರಾಷ್ಟ್ರೀಯ ತಂಡದ ಪರ ಆಡಿದ್ದರು. ಇತ್ತೀಚೆಗೆ 17 ವರ್ಷದ ಜೆಮೀಮಾ ರೋಡ್ರಿಗಸ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದರು.

ಕನ್ನಡತಿ ವೇದಾ ಕೃಷ್ಣಮೂರ್ತಿ ಟಿ20 ತಂಡದಲ್ಲಿ ಮಾತ್ರ ಸ್ಥಾನ ಪಡೆದಿದ್ದರೆ, ರಾಜೇಶ್ವರಿ ಗಾಯಕ್ವಾಡ್ ಏಕದಿನ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಗುಜರಾತ್​ನ ಸೂರತ್​ನಲ್ಲಿ ಸೆಪ್ಟೆಂಬರ್ 24ರಂದು ಟಿ20 ಸರಣಿ ಆರಂಭಗೊಂಡರೆ, ಅಕ್ಟೋಬರ್ 9ರಿಂದ ವಡೋದರಲ್ಲಿ ಏಕದಿನ ಸರಣಿ ನಡೆಯಲಿದೆ.

ಏಕದಿನ ತಂಡ : ಮಿಥಾಲಿ ರಾಜ್ (ನಾಯಕಿ), ಜೆಮೀಮಾ ರೋಡ್ರಿಗಸ್, ಹರ್ವನ್​ಪ್ರೀತ್ ಕೌರ್ (ಉಪನಾಯಕಿ), ಪೂನಂ ರಾವತ್, ಸ್ಮೃತಿ ಮಂದನಾ, ದೀಪ್ತಿ ಶರ್ಮ, ತಾನಿಯಾ ಭಾಟಿಯಾ (ವಿಕೀ), ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಮಾನ್ಸಿ ಜೋಷಿ, ಏಕ್ತಾ ಬಿಷ್ಟ್, ಪೂನಂ ಯಾದವ್, ಡಿ.ಹೇಮಲತಾ, ರಾಜೇಶ್ವರಿ ಗಾಯಕ್ವಾಡ್, ಪ್ರಿಯಾ ಪೂನಿಯಾ.

ಟಿ20 ತಂಡ: ಹರ್ವನ್​ಪ್ರೀತ್ (ನಾಯಕಿ), ಸ್ಮೃತಿ (ಉಪನಾಯಕಿ), ಜೆಮೀಮಾ ರೋಡ್ರಿಗಸ್, ದೀಪ್ತಿ ಶರ್ಮ, ತಾನಿಯಾ ಭಾಟಿಯಾ (ವಿಕೀ), ಪೂನಂ ಯಾದವ್, ಶಿಖಾ ಪಾಂಡೆ, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ವೇದಾ ಕೃಷ್ಣಮೂರ್ತಿ, ಹರ್ಲಿನ್ ಡಿಯೊಲ್, ಅನುಜಾ ಪಾಟೀಲ್, ಶೆಫಾಲಿ ವರ್ಮ, ಮಾನ್ಸಿ ಜೋಷಿ.