‘ಮಹಿಳಾ ಉದ್ಯಮಶೀಲತಾ ವೇದಿಕೆ’ ಅಸ್ತಿತ್ವ: ನೀತಿ ಆಯೋಗ

0
16

ಮಹಿಳೆಯರು ಆರಂಭಿಸುವ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಉತ್ತೇಜಿಸುವ ಸೌಲಭ್ಯಕ್ಕೆ ನೀತಿ ಆಯೋಗವು ಚಾಲನೆ ನೀಡಿದೆ.

ತಮ್ಮ ಉದ್ಯಮಶೀಲತಾ ಕನಸುಗಳನ್ನು ಈಡೇರಿಸಿಕೊಳ್ಳಲು, ದೀರ್ಘಾವಧಿವರೆಗೆ ಉದ್ದಿಮೆ ಮುನ್ನಡೆಸಿಕೊಂಡು ಹೋಗಲು, ಉದ್ಯಮದ ಯಶಸ್ಸಿಗೆ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳಲು ನೆರವಾಗುವ ‘ಮಹಿಳಾ ಉದ್ಯಮಶೀಲತಾ ವೇದಿಕೆ’ಯನ್ನು (ಡಬ್ಲ್ಯುಇಪಿ)  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ಈ ವೇದಿಕೆಯು ನೀತಿ ಆಯೋಗದ ಸಹಯೋಗದಲ್ಲಿ ಕಾರ್ಯನಿರ್ವಹಿಸಲಿದೆ.

ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಅವರು  ಈ ವೇದಿಕೆಯನ್ನು ಉದ್ಘಾಟಿಸಿದರು.  ಗಾಯಕ ಕೈಲಾಶ್‌ ಖೇರ್‌ ಸಂಯೋಜಿಸಿ ಹಾಡಿರುವ ‘ನಾರಿ ಶಕ್ತಿ’ ಗೀತೆಯನ್ನು ಬಿಡುಗಡೆ ಮಾಡಲಾಯಿತು.

ಈ ವೇದಿಕೆಯು ಮಹಿಳಾ ಉದ್ಯಮಿಗಳು ತಮ್ಮದೇ ಆದ ಸಂಪರ್ಕ ಜಾಲ ರೂಪಿಸಿಕೊಳ್ಳಲು, ಪಾಲುದಾರಿಕೆ ಹೊಂದಲು, ಸಲಹೆ ಪಡೆಯಲು ಮತ್ತು ಇತರ ಉದ್ಯಮಿಗಳ ಜತೆ ಸಂವಹನ ಸಾಧಿಸಲು ನೆರವಾಗಲಿದೆ.

ಮಹಿಳೆಯರು ಉದ್ದಿಮೆ ಆರಂಭಿಸಲು ಸ್ಫೂರ್ತಿ ತುಂಬುವ, ಅಗತ್ಯವಾದ ಮಾಹಿತಿ ನೀಡಿ ಪೂರಕ ಸೌಲಭ್ಯ ಕಲ್ಪಿಸುವ ಮತ್ತು ಉದ್ದಿಮೆ ಆರಂಭಿಸಿ ವಹಿವಾಟು ವಿಸ್ತರಿಸಲು ಅಗತ್ಯವಾದ ಇಚ್ಛಾ, ಜ್ಞಾನ ಮತ್ತು ಕರ್ಮಾ ಶಕ್ತಿ ಎನ್ನುವ ಮೂರು ಮುಖ್ಯವಾದ ಆಧಾರಸ್ತಂಭಗಳನ್ನು ಈ ವೇದಿಕೆ ಒಳಗೊಂಡಿದೆ ಎಂದು ಆಯೋಗವು ತಿಳಿಸಿದೆ.

ಉದ್ದಿಮೆ ಸ್ಥಾಪನೆಯಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಬಗೆಹರಿಸಲೂ ಈ ವೇದಿಕೆ ನೆರವಾಗಲಿದೆ. ಮಹಿಳೆಯರಿಗೆ ನೆರವಾಗಲು ಹಲವಾರು ಉದ್ದಿಮೆ ಸಂಸ್ಥೆಗಳು ಮತ್ತು ವಿವಿಧ ಕೈಗಾರಿಕಾ ಸಂಘಗಳೂ ನೀತಿ ಆಯೋಗದ ಜತೆ ಕೈಜೋಡಿಸಿವೆ.