ಮಹಾರಾಷ್ಟ್ರ ಸರಕಾರಕ್ಕೆ 500 ಕೋಟಿ ಬಡ್ಡಿ ರಹಿತ ಸಾಲ ನೀಡಿದ ಶಿರಡಿ ಟ್ರಸ್ಟ್

0
571

ಅಹ್ಮದ್‌ನಗರ ಜಿಲ್ಲೆಯ ವಿವಿಧ ತೆಹ್ಸಿಲ್‌ಗಳಲ್ಲಿ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ನಿಲ್ವಾಂಡೆ ನೀರಾವರಿ ಯೋಜನೆಯಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಆರ್ಥಿಕ ಕೊರತೆಯನ್ನೆದುರಿಸುತ್ತಿದ್ದ ದೇವೇಂದ್ರ ಫಡ್ನವಿಸ್ ಸರಕಾರವು ಶಿರಡಿಗೆ ಸಾಯಿಬಾಬಾ ದೇವಸ್ಥಾನ ಟ್ರಸ್ಟ್‌ನಿಂದ 500 ಕೋಟಿ ರೂ ಸಾಲ ಪಡೆದುಕೊಳ್ಳಲು ನಿರ್ಧರಿಸಿದೆ.

ಮುಂಬಯಿ: ಅಹ್ಮದ್‌ನಗರ ಜಿಲ್ಲೆಯ ವಿವಿಧ ತೆಹ್ಸಿಲ್‌ಗಳಲ್ಲಿ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ನಿಲ್ವಾಂಡೆ ನೀರಾವರಿ ಯೋಜನೆಯಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಆರ್ಥಿಕ ಕೊರತೆಯನ್ನೆದುರಿಸುತ್ತಿದ್ದ ದೇವೇಂದ್ರ ಫಡ್ನವಿಸ್ ಸರಕಾರವು ಶಿರಡಿಗೆ ಸಾಯಿಬಾಬಾ ದೇವಸ್ಥಾನ ಟ್ರಸ್ಟ್‌ನಿಂದ 500 ಕೋಟಿ ರೂ ಸಾಲ ಪಡೆದುಕೊಳ್ಳಲು ನಿರ್ಧರಿಸಿದೆ. 

ಬಿಜೆಪಿ ನೇತೃತ್ವದ ಸರಕಾರ ನೀರಾವರಿ ಯೋಜನೆಗೆ ಸಾಲಕ್ಕಾಗಿ ಮನವಿ ಮಾಡಿದಾಗ ಬಿಜೆಪಿ ನಾಯಕರೂ ಆಗಿರುವ ಟ್ರಸ್ಟ್ ಅಧ್ಯಕ್ಷ ಸುರೇಶ್ ಹವಾರೆ ಸಾಲ ನೀಡುವ ನಿರ್ಧಾರ ಕೈಗೊಂಡರು. ರಾಜ್ಯ ಸರ್ಕಾರ ನಡೆಸುವ ನಿಗಮಕ್ಕೆ ಈ ಹಿಂದೆ ಬಡ್ಡಿ ರಹಿತವಾಗಿ ಇಷ್ಟು ದೊಡ್ಡ ಮಟ್ಟದ ಸಾಲ ನೀಡಿದ ಉದಾಹರಣೆ ಇಲ್ಲ. ಅಲ್ಲದೆ, ಸಾಲದ ಮರುಪಾವತಿಗಾಗಿ ಯಾವುದೇ ಕಾಲಾವಧಿಯನ್ನು ನಿಗದಿಪಡಿಸಲಾಗಿಲ್ಲ. 

ಸಾಲಕ್ಕೆ ಸಂಬಂಧಿಸಿದಂತೆ ಫೆಬ್ರವರಿ 1 ರಂದು ಮುಖ್ಯಮಂತ್ರಿ ಫಡ್ನವಿಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಲದ ಪ್ರಸ್ತಾಪವನ್ನು ಅಂಗೀಕರಿಸಲಾಯಿತು ಮತ್ತು ಎರಡು ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡುವ ಸಲುವಾಗಿ ಶನಿವಾರದಂದು ಆದೇಶ ಹೊರಡಿಸಲಾಯಿತು. 

“ಸಾಯಿಬಾಬಾ ದೇವಸ್ಥಾನ ಟ್ರಸ್ಟ್ ಮತ್ತು ಗೋದಾವರಿ-ಮರಾಠವಾಡ ನೀರಾವರಿ ಅಭಿವೃದ್ಧಿ ನಿಗಮವು ಈ ಉದ್ದೇಶಕ್ಕಾಗಿ ಒಪ್ಪಂದ ಪತ್ರಕ್ಕೆ ಸಹಿ ಮಾಡಿದೆ ಹಾಕಿವೆ. ದೇವಾಲಯದ ಟ್ರಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ನಿರ್ಧಾರವನ್ನು ತಳೆಯಲಾಗಿರುವುದು ವಿಶೇಷ “, ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಯೋಜನೆ ಕೆಲಸ ದೀರ್ಘಕಾಲದಿಂದ ಬಾಕಿ ಉಳಿದಿತ್ತು. ಒಟ್ಟು 1,200 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ದೇವಾಲಯದ ಟ್ರಸ್ಟ್ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ. ಜಲ ಸಂಪನ್ಮೂಲ ಇಲಾಖೆ ಪ್ರಸಕ್ತ ವರ್ಷದಲ್ಲಿ 300 ಕೋಟಿ ರೂಪಾಯಿಗಳ ಬಜೆಟ್ ಸೌಲಭ್ಯವನ್ನು ನೀಡಿದೆ. ಮುಂದಿನ ವರ್ಷದ ಬಜೆಟ್‌ನಲ್ಲಿ 400 ಕೋಟಿ ರೂ ನೀಡಲಿದೆ. “ಎರಡು ವರ್ಷಗಳಲ್ಲಿ ಎಡ ಮತ್ತು ಬಲ ದಂಡ ಕಾಲುವೆಯ ಕೆಲಸವನ್ನು ಪೂರ್ಣಗೊಳಿಸುವ ನಿರೀಕ್ಷೆ ನಮ್ಮದು”, ಎಂದು ಅವರು ಹೇಳಿದರು. 

ಪ್ರತಿದಿನ ಶಿರಡಿ ದೇವಾಲಯಕ್ಕೆ ಅಂದಾಜು 70,000 ಜನರು ಭೇಟಿ ನೀಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಈ ಸಂಖ್ಯೆ 3.5 ಲಕ್ಷ ದಾಟುತ್ತದೆ. ಆದರೆ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಅಹ್ಮದ್ ನಗರ ಜಿಲ್ಲೆಯ ಎಲ್ಲ ತೆಹ್ಸಿಲ್‌ಗಳ ನೀರಿನ ಬೇಡಿಕೆಯನ್ನು ಪೂರೈಸುವಂತೆ ನಾವು ಪ್ರಸ್ತಾವನೆಯನ್ನು ಇಟ್ಟಿದ್ದೇವೆ . ಯೋಜನೆ ಪೂರ್ಣಗೊಂಡ ಬಳಿಕ ಅಕೋಲೆ, ಸಂಗಮ್ನೇರ್, ರಹುರಿ, ಕೊಪ್ಪಗಾಂವ್ ಮತ್ತು ಶಿರಡಿ ಗ್ರಾಮಗಳು ಈ ಯೋಯನೆಯ ಲಾಭ ಪಡೆದುಕೊಳ್ಳಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.