ಮಹಾತ್ಮ ಗಾಂಧಿ 150ನೇ ಜನ್ಮದಿನ ಪ್ರಯುಕ್ತ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ಯಾಲೆಸ್ಟೈನ್

0
26

ಮಹಾತ್ಮ ಗಾಂಧಿಯವರ 150ನೇ ಜನ್ಮದಿನ ಪ್ರಯುಕ್ತ ಗಾಂಧೀಜಿಯವರ ಪರಂಪರೆ ಹಾಗೂ ಮೌಲ್ಯಗಳನ್ನು ಗೌರವಿಸುವ ಸಲುವಾಗಿ ಪ್ಯಾಲೆಸ್ಟೈನ್ ಅಕ್ಟೋಬರ್ 1 ರ ಮಂಗಳವಾರ ಅಂಚೆ ಚೀಟಿ ಬಿಡುಗಡೆಗೊಳಿಸಿದೆ.

ರಮಲ್ಲಾ: ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನ ಪ್ರಯುಕ್ತ ಗಾಂಧೀಜಿಯವರ ಪರಂಪರೆ ಹಾಗೂ ಮೌಲ್ಯಗಳನ್ನು ಗೌರವಿಸುವ ಸಲುವಾಗಿ ಪ್ಯಾಲೆಸ್ಟೈನ್ ಅಕ್ಟೋಬರ್ 1 ರ ಮಂಗಳವಾರ ಅಂಚೆ ಚೀಟಿ ಬಿಡುಗಡೆಗೊಳಿಸಿದೆ.

ಪ್ಯಾಲೆಸ್ಟೈನ್​​ನಲ್ಲಿರುವ ಭಾರತದ ಪ್ರತಿನಿಧಿ ಸುನೀಲ್ ಕುಮಾರ್ ಸಮ್ಮುಖದಲ್ಲಿ ಪ್ಯಾಲೆಸ್ಟೈನ್ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಇಶಾಕ್ ಸೆಡೆರ್ ಅಂಚೆ ಚೀಟಿ ಬಿಡುಗಡೆಗೊಳಿಸಿದರು. ಮಹಾತ್ಮ ಗಾಂಧಿಯವರು ತೋರಿದ ಅಹಿಂಸೆ, ಮೌಲ್ಯಗಳು, ಬುದ್ಧಿವಂತಿಕೆ ಮತ್ತು ದೂರದೃಷ್ಟಿ ತತ್ವಗಳನ್ನು ಸೆಡರ್ ಒತ್ತಿ ಹೇಳಿದರು.

ಗಾಂಧೀಜಿಯವರ ಸ್ಮರಣೆ, ಪರಂಪರೆ ಹಾಗೂ ಮೌಲ್ಯಗಳನ್ನು ಗೌರವಿಸುವ ಸಲುವಾಗಿ ಪ್ಯಾಲೆಸ್ಟೈನ್ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಗಾಂಧಿ ತೋರಿದ ಮಾರ್ಗದರ್ಶನಗಳು ಜನರನ್ನು ಮಾನವೀಯತೆಯತ್ತ ಮಾರ್ಗದರ್ಶನ ನೀಡುತ್ತವೆ ಎಂದು ಸುನೀಲ್ ಕುಮಾರ್ ಹೇಳಿದರು. ಮನುಕುಲ ಅಭಿವೃದ್ಧಿಗೆ ಮಹಾತ್ಮರ ಕೊಡುಗೆಗಳನ್ನು ಬಣ್ಣಿಸಿದರು.

ಮಹಾತ್ಮ ಗಾಂಧಿಯವರ 150ನೇ ಜನ್ಮದಿನೋತ್ಸವ ಯಶಸ್ವಿಗೊಳಿಸಲು ಭಾರತ ಸರ್ಕಾರ ಒಂದು ವರ್ಷದಿಂದ ರಮಲ್ಲಾ ಸೇರಿದಂತೆ ವಿವಿಧ ನಗರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅಪಾರ ಪ್ರಮಾಣದಲ್ಲಿ ಪ್ಯಾಲೆಸ್ಟೈನ್ ಯುವಕರು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.