ಮಹಾತ್ಮನ ನೆನಪಿನಲ್ಲಿ ‘ಗಾಂಧಿ ಸ್ಮೃತಿ’

0
16

ಬಿರ್ಲಾ ಹೌಸ್‌ ಎಂದೇ ಕರೆಯಲಾಗುತ್ತಿದ್ದ ಸ್ಥಳದಲ್ಲಿ ‘ಗಾಂಧಿ ಸ್ಮೃತಿ‘ ಸ್ಥಾಪಿಸಲಾಗಿದೆ. ಇದು ಮಹಾತ್ಮ ಗಾಂಧಿ ಕೊನೆಯುಸಿರೆಳೆದ ಸ್ಥಳ. ನಾಥೂರಾಮ್‌ ಗೋಡ್ಸೆ ಗುಂಡಿಗೆ ಬಲಿಯಾಗಿ ‘ಹೇ ರಾಮ’ ಎಂದು ಉದ್ಗರಿಸಿ ಅಹಿಂಸಾವಾದಿ ಇದೇ ನೆಲದಲ್ಲಿ ಪ್ರಾಣ ಬಿಟ್ಟರು. ‘ಗಾಂಧಿ ಸ್ಮೃತಿ’ ಗಾಂಧೀಜಿ ಅಂತಿಮ ಹೆಜ್ಜೆ ಹಾಕಿದ ಕ್ಷಣಕ್ಕೆ ಸಾಕ್ಷಿಯಾಗಿದೆ.

ನವದೆಹಲಿ (ಪಿಟಿಐ): ಇದು ಮಹಾತ್ಮ ಗಾಂಧಿ ಕೊನೆಯುಸಿರೆಳೆದ ಸ್ಥಳ. ನಾಥೂರಾಮ್‌ ಗೋಡ್ಸೆ ಗುಂಡಿಗೆ ಬಲಿಯಾಗಿ ‘ಹೇ ರಾಮ’ ಎಂದು ಉದ್ಗರಿಸಿ ಅಹಿಂಸಾವಾದಿ ಇದೇ ನೆಲದಲ್ಲಿ ಪ್ರಾಣ ಬಿಟ್ಟರು. ‘ಗಾಂಧಿ ಸ್ಮೃತಿ’ ಗಾಂಧೀಜಿ ಅಂತಿಮ ಹೆಜ್ಜೆ ಹಾಕಿದ ಕ್ಷಣಕ್ಕೆ ಸಾಕ್ಷಿಯಾಗಿದೆ.

‘ನಮ್ಮ ಬದುಕಿನ ದೀಪವೇ ಇಂದು ನಂದಿ ಹೋಯಿತು’ ಎಂದು ಮಹಾತ್ಮ ಗಾಂಧೀಜಿ ಹತ್ಯೆಗೀಡಾದ ದಿನ ಜವಾಹರಲಾಲ್‌ ನೆಹರೂ ಕಂಬನಿ ಮಿಡಿದಿದ್ದರು.

ಈ ಮಹಾತ್ಮನ 150ನೇ ಜನ್ಮ ದಿನವನ್ನು ಭಾರತ ಮತ್ತು ಜಗತ್ತು ಆಚರಿಸಲು ಸಜ್ಜಾಗಿದೆ. ಗಾಂಧೀಜಿ ಅವರ ತತ್ವಾದರ್ಶಗಳು, ಹೋರಾಟಗಳ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವ ಪ್ರಯತ್ನ ಈ ಸಂದರ್ಭದಲ್ಲಿ ನಡೆದಿದೆ. ಈ ನಿಟ್ಟಿನಲ್ಲಿ ‘ಗಾಂಧಿ ಸ್ಮೃತಿ’ಯೇ ಮಹಾತ್ಮನ ಬದುಕನ್ನು ಅನಾವರಣಗೊಳಿಸುತ್ತಿದೆ.

ಬಿರ್ಲಾ ಹೌಸ್‌ ಎಂದೇ ಕರೆಯಲಾಗುತ್ತಿದ್ದ ಸ್ಥಳದಲ್ಲಿ ‘ಗಾಂಧಿ ಸ್ಮೃತಿ‘ ಸ್ಥಾಪಿಸಲಾಗಿದ್ದು, ಮಹಾತ್ಮ ಗಾಂಧಿ ಅವರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯವೂ ಇದೆ. ಬಾಪೂಜಿ ತಮ್ಮ ಕೊನೆಯ 144 ದಿನಗಳು ಬಿರ್ಲಾ ಹೌಸ್‌ನಲ್ಲಿ ಕಳೆದಿದ್ದರು.  ಪ್ರವಾಸಿಗರು, ಶಾಲಾ ಮಕ್ಕಳು ದೇಶ–ವಿದೇಶಗಳಿಂದ ಇಲ್ಲಿಗೆ ನಿರಂತರವಾಗಿ ಭೇಟಿ ನೀಡುತ್ತಾರೆ. ಮಹಾತ್ಮನ ಸರಳ ಜೀವನದ ಆದರ್ಶಗಳನ್ನು ನೆನಪಿಸಿಕೊಳ್ಳುತ್ತಾರೆ. 1973ರಲ್ಲಿ ಈ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲಾಯಿತು. ಗಾಂಧೀಜಿ ಅವರ ಬದುಕಿಗೆ ಸಂಬಂಧಿಸಿದ ಚಿತ್ರಗಳು, ಪತ್ರಗಳು ಮತ್ತು ಮಲ್ಟಿಮೀಡಿಯಾ ವಸ್ತು ಸಂಗ್ರಹಾಲಯ ಈ ಆವರಣದಲ್ಲಿದೆ.

‘ಮಹಾತ್ಮ ಗಾಂಧೀಜಿ ಅಪಾರ ಪ್ರಭಾವ ಬೀರಿದ್ದಾರೆ. ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಸಂದೇಶ ಸಾರಿದ ವ್ಯಕ್ತಿಯ ಜಾಗವೇ ಸದಾ ನಮ್ಮ ಬದುಕಿಗೆ ಪಾಠವಾಗುತ್ತದೆ’ಎಂದು ಗಾಂಧಿ ಸ್ಮೃತಿಗೆ ಭೇಟಿ ನೀಡಿದ್ದ ಚೀನಾದ ಪ್ರವಾಸಿಗ ಮಿಯಾ ಪ್ರತಿಕ್ರಿಯಿಸಿದರು.