ಮಹದಾಯಿ ವಿವಾದ: ಮತ್ತೆ ಕ್ಯಾತೆ ತೆಗೆದ ಗೋವಾ

0
101

ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಹರಿಸುವ ವಿಚಾರವಾಗಿ ಗೋವಾ ಮತ್ತೆ ಕ್ಯಾತೆ ತೆಗೆದಿದ್ದು, ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸುವುದಾಗಿ ಹೇಳಿದೆ.

ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಹರಿಸುವ ವಿಚಾರವಾಗಿ ಗೋವಾ ಮತ್ತೆ ಕ್ಯಾತೆ ತೆಗೆದಿದ್ದು, ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸುವುದಾಗಿ ಹೇಳಿದೆ. 

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ಬಹಿರಂಗಪಡಿಸಿರುವ ಸಾಲಿಸಿಟರ್‌ ಜನರಲ್‌ ಆತ್ಮಾರಾಮ ನಾಡಕರ್ಣಿ, ‘‘ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡು ಕರ್ನಾಟಕ ಜಲ ವಿದ್ಯುತ್‌ ಯೋಜನೆಗೆ ಬಳಸಿಕೊಳ್ಳಲು ಹೊರಟಿದೆ. ಕಸ್ತೂರಿ ರಂಗನ್‌ ವರದಿ ಪ್ರಕಾರ ಇಂತಹ ಯೋಜನೆಗಳನ್ನು ಪಶ್ಚಿಮ ಘಟ್ಟಗಳ ಭಾಗದಲ್ಲಿ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಮಹದಾಯಿ ನದಿ ನೀರನ್ನು ಕರ್ನಾಟಕ ತಿರುಗಿಸಿಕೊಳ್ಳುವುದರ ವಿರುದ್ಧ ಗೋವಾ ಸರಕಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದೆ,’’ ಎಂದು ಹೇಳಿದ್ದಾರೆ. 

‘‘ಕರ್ನಾಟಕ ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳುವುದಕ್ಕೆ ನಾವು ವಿರೋಧ ವ್ಯಕ್ತಪಡಿಸದಿದ್ದರೆ ಪಶ್ಚಿಮ ಘಟ್ಟ ಅರಣ್ಯ ನಾಶವಾಗಲಿದೆ’’, ಎಂದು ಆತಂಕ ವ್ಯಕ್ತಪಡಿಸಿರುವ ಅವರು, ‘‘ಗೋವಾ ಮಹದಾಯಿ ಹೋರಾಟಗಾರರು ಸುಮ್ಮನೆ ಕುಳಿತುಕೊಳ್ಳಬಾರದು. ಕರ್ನಾಟಕ ಕಳಸಾ ಬಂಡೂರಿ ಭಾಗದಲ್ಲಿ ಕೈಗೊಳ್ಳುವ ಪ್ರತಿ ಕಾಮಗಾರಿ ಕುರಿತಂತೆ ಹೆಚ್ಚಿನ ನಿಗಾ ವಹಿಸಬೇಕು. ಅಲ್ಲಿ ನಡೆಯುವ ಪ್ರತಿ ವಿಷಯಗಳ ಮಾಹಿತಿ ಪಡೆಯಲು ರೆಡಾರ್‌ ಆ್ಯಂಟೆನಾ ಅಳವಡಿಸಬೇಕು,’’ ಎಂದು ಸರಕಾರಕ್ಕೆ ಸಲಹೆ ನೀಡಿದ್ದಾರೆ.