ಮಲೇರಿಯಾ: ಭಾರತ ಆಫ್ರಿಕಾದಲ್ಲಿ ಅತಿ ಹೆಚ್ಚು(ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಉಲ್ಲೇಖ)

0
273

ವಿಶ್ವದಲ್ಲಿ ಹಿಂದಿನ ವರ್ಷ ವರದಿಯಾದ ಮಲೇರಿಯಾ ಪ್ರಕರಣಗಳಲ್ಲಿ ಶೇ 80ರಷ್ಟು ಭಾರತ ಮತ್ತು ಆಫ್ರಿಕಾದ 15 ರಾಷ್ಟ್ರಗಳಲ್ಲೇ ಕಂಡುಬಂದಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.

ವಿಶ್ವಸಂಸ್ಥೆ (ಪಿಟಿಐ): ವಿಶ್ವದಲ್ಲಿ ಹಿಂದಿನ ವರ್ಷ ವರದಿಯಾದ ಮಲೇರಿಯಾ ಪ್ರಕರಣಗಳಲ್ಲಿ ಶೇ 80ರಷ್ಟು ಭಾರತ ಮತ್ತು ಆಫ್ರಿಕಾದ 15 ರಾಷ್ಟ್ರಗಳಲ್ಲೇ ಕಂಡುಬಂದಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.

ಈ ವರದಿ ಪ್ರಕಾರ, ಇಡೀ ಭಾರತದ‌125 ಕೋಟಿ ಜನರೂ ಸೊಳ್ಳೆ ಕಡಿತದಿಂದ ಹರಡುವ ಮಲೇರಿಯಾ  ಕಾಯಿಲೆಯ  ಅಪಾಯ ಎದುರಿಸುತ್ತಿದ್ದಾರೆ.

2016ಕ್ಕೆ ಹೋಲಿಸಿದರೆ 2017ರಲ್ಲಿ ಮಲೇರಿಯಾ ನಿಯಂತ್ರಣದಲ್ಲಿ ಪ್ರಗತಿ ಸಾಧಿಸಿರುವ ರಾಷ್ಟ್ರಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ. ಅಲ್ಲದೆ, ಗಮನಾರ್ಹ ಸಾಧನೆ ಮಾಡಿದೆ.

ಮಲೇರಿಯಾದಿಂದ ಹರಡುವ ಸೋಂಕು ಮತ್ತು ಸಾವಿನ ಪ್ರಮಾಣ ತಗ್ಗಿಸುವ ಜಾಗತಿಕ ಗುರಿಯನ್ನು ತಲುಪಲು ಇನ್ನೂ ಸಾಧ್ಯವಾಗಿಲ್ಲ ಎಂದು ವಿಶ್ವ ಮಲೇರಿಯಾ ವರದಿ ಕಳವಳ ವ್ಯಕ್ತಪಡಿಸಿದೆ.

2016ಕ್ಕೆ ಹೋಲಿಸಿದರೆ 2017ರಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ನಿಧಾನಕ್ಕೆ ಏರಿಕೆಯಾಗಿದ್ದು, 21.7 ಕೋಟಿಯಿಂದ 21.9 ಕೋಟಿಗೆ ಏರಿದೆ. ವಿಶ್ವ ಆರೋಗ್ಯ ಸಂಸ್ಥೆಯು 2016ರಿಂದ 2030ರ ವೇಳೆಗೆ ಮಲೇರಿಯಾ ಮುಕ್ತಗೊಳಿಸಲು ಜಾಗತಿಕ ತಾಂತ್ರಿಕ ತಂತ್ರಗಾರಿಕೆ ರೂಪಿಸಿದ್ದು, 2020ರ ವೇಳೆಗೆ        ಮಲೇರಿಯಾದಿಂದ ಸಂಭವಿಸುವ ಸಾವು–ನೋವು ಪ್ರಕರಣಗಳಲ್ಲಿ ಕನಿಷ್ಠ ಶೇ40 ರಷ್ಟನ್ನು ತಗ್ಗಿಸುವ ಗುರಿ ಹೊಂದಲಾಗಿದೆ.

ಮಲೇರಿಯಾ ಪ್ರಕರಣಗಳಲ್ಲಿ ಹೆಚ್ಚಿನ ಬಾರಿ ಚಿಕಿತ್ಸೆ ವಿಫಲವಾಗಿರುವುದನ್ನು ಪತ್ತೆ ಹಚ್ಚಿದ ಮತ್ತು ಚಿಕಿತ್ಸಾ ನೀತಿಗಳನ್ನು ಬದಲಿಸಿಕೊಳ್ಳುವ ನಿಟ್ಟಿನಲ್ಲಿ ಸ್ಪಂದಿಸಿದ ದೇಶಗಳ ಪೈಕಿಯೂ ಭಾರತ ಮುಂಚೂಣಿಯಲ್ಲಿದೆ. ಅಲ್ಲದೆ, 2020ರ ವೇಳೆಗೆ ಭಾರತ ಮತ್ತು ಇಂಡೊನೇಷ್ಯಾ ಶೇ 20ರಿಂದ 40ರಷ್ಟು ಪ್ರಕರಣಗಳನ್ನು ತಗ್ಗಿಸುವ ಗುರಿ ಸಾಧಿಸಲಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ.

660 ಕೋಟಿ

ವಿಶ್ವಸಂಸ್ಥೆ ಪ್ರತಿ ವರ್ಷ ಮಲೇರಿಯಾ ನಿಯಂತ್ರಣಕ್ಕೆ ವಿನಿಯೋಗಿಸುತ್ತಿರುವ ಅನುದಾನ

6.60 ಲಕ್ಷ

ಜನ ಪ್ರತಿ ವರ್ಷ ಮಲೇರಿಯಾದಿಂದ ಸಾವಿಗೀಡಾಗುತ್ತಿದ್ದಾರೆ

ಪೆರುಗ್ವೆ ಮಲೇರಿಯಾ ಮುಕ್ತ ರಾಷ್ಟ್ರ

45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಅಮೆರಿಕದ ಪೆರುಗ್ವೆ ಮಲೇರಿಯಾ ಮುಕ್ತ ರಾಷ್ಟ್ರ ಎನ್ನುವ ಪ್ರಮಾಣಪತ್ರವನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಪಡೆದುಕೊಂಡಿದೆ. ಮಲೇರಿಯಾ ಮುಕ್ತ ರಾಷ್ಟ್ರಗಳ ಸಂಖ್ಯೆ 37 ರಿಂದ 46 ಕ್ಕೆ ಏರಲಿದ್ದು, ಈ ಬಾರಿ ಅಲ್ಜೀರಿಯಾ, ಅರ್ಜೆಂಟಿನಾ ಮತ್ತು ಉಜ್ಬೇಕಿಸ್ತಾನ ಪ್ರಮಾಣಪತ್ರಕ್ಕೆ ಕೋರಿಕೆ ಸಲ್ಲಿಸಿವೆ.