ಮರೆಯಾದ ಅಂಬರೀಶ್‌, ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನ

0
661

ಕನ್ನಡ ಚಿತ್ರ ರಂಗದ ದಿಗ್ಗಜ, ರೆಬೆಲ್‌ ಸ್ಟಾರ್‌, ಮಾಜಿ ಸಚಿವ ಅಂಬರೀಶ್‌ (66) ವಿಧಿವಶರಾಗಿದ್ದಾರೆ.ತೀವ್ರ ಉಸಿರಾಟದ ತೊಂದರೆ ಹಾಗೂ ಎದೆ ನೋವು ಕಾಣಿಸಿಕೊಂಡ ಅವರನ್ನು ಶನಿವಾರ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 10.15ರ ಸುಮಾರಿಗೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರು: ಕನ್ನಡ ಚಿತ್ರ ರಂಗದ ದಿಗ್ಗಜ, ರೆಬೆಲ್‌ ಸ್ಟಾರ್‌, ಮಾಜಿ ಸಚಿವ ಅಂಬರೀಶ್‌ (66) ವಿಧಿವಶರಾಗಿದ್ದಾರೆ.

ತೀವ್ರ ಉಸಿರಾಟದ ತೊಂದರೆ ಹಾಗೂ ಎದೆ ನೋವು ಕಾಣಿಸಿಕೊಂಡ ಅವರನ್ನು ನವೆಂಬರ್ 24 ರ ಶನಿವಾರ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 10.15ರ ಸುಮಾರಿಗೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. 

ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಅಂಬರೀಶ್ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು. ಬಳಿಕ ಪಾರ್ಥಿಯ ಶರೀರವನ್ನು ಕಂಠೀರವ ಸ್ಟೇಡಿಯಂಗೆ ತರಲಾಗಿದೆ. 

ಭಾನುವಾರ ಇಡೀ ದಿನ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಕಂಠೀರವ ಇರಿಸಲಾಗುತ್ತಿದೆ. ಅಂತಿಮ‌ ದರ್ಶನಕ್ಕೆ ಆಗಮಿಸಲು ಮಂಡ್ಯ ಜಿಲ್ಲೆಯಿಂದ ವಿಶೇಷ ಸಾರಿಗೆ ಬಸ್ ವ್ಯವಸ್ಥೆಗೊಳಿಸಲಾಗಿದೆ. 

ಸ್ಟೇಡಿಯಂ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸುಮಾರು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಈಗಾಗಲೇ ಸ್ಟೇಡಿಯಂ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. 

ಶನಿವಾರ ಸಂಜೆ 4.30ರವರೆಗೂ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಭಾ.ಮ.ಹರೀಶ್‌ ಅವರ ಜತೆ ತಮ್ಮ ನಿವಾಸದಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದ ಅಂಬರೀಶ್‌ ಅವರ ಆರೋಗ್ಯ ಸಂಜೆ 5 ಗಂಟೆ ವೇಳೆಗೆ ಏರುಪೇರಾಯಿತು. ಕುಟುಂಬದ ಸದಸ್ಯರು ಮತ್ತು ಆತ್ಮೀಯರು ಅವರನ್ನು ತಕ್ಷಣವೇ ವಿಕ್ರಂ ಆಸ್ಪತ್ರೆಗೆ ಕರೆದೊಯ್ದರು. ಡಾ. ಸತೀಶ್‌ ಮತ್ತು ತಂಡ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಆರಂಭಿಸಿದರಾದರೂ ರಾತ್ರಿ 10.50ರ ಸುಮಾರಿಗೆ ನಿಧನರಾದರು. 

ಅಂಬರೀಶ್ ಅಂತ್ಯಕ್ರಿಯೆ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಜರುಗಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿ ಸ್ಮಾರಕದ ಬಳಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಕುಟುಂಬ ಸದಸ್ಯರ ಜತೆ ಚರ್ಚಿಸಿ, ಸಲಹೆ ಸೂಚನೆ ಪಡೆದು ಕ್ರಮ ಕೈಗೊಳ್ಳಲಾಗಿದೆ ಎಂದರು. 

ಮಂಡ್ಯದ ಗಂಡು ಅಂಬರೀಶ್ ನಿಧನದಿಂದ ಮಂಡ್ಯ ಜಿಲ್ಲೆಯಲ್ಲಿ ದುಃಖ ಮಡುಗಟ್ಟಿದೆ. 

ಮಂಡ್ಯದಲ್ಲಿ ಶನಿವಾರ ಬೆಳಗ್ಗೆ ಬಸ್‌ ದುರಂತ ಘಟನೆ ಮಾಸುವ ಬೆನ್ನಲ್ಲೇ ಅಂಬರೀಷ್ ನಿಧನ ಮಂಡ್ಯ ಜನತೆಗೆ ಮತ್ತೊಂದು ಶಾಕ್‌ ಕೊಟ್ಟಿದೆ. 

ನಟನಾಗಿ, ರಾಜಕಾರಣಿಯಾಗಿ, ಕೊಡುಗೈ ದಾನಿಯಾಗಿ, ಜನಾನುರಾಗಿಯಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದ ಕಲಿಯುಗದ ಕರ್ಣನಾಗಿದ್ದ ಅಂಬರೀಷ್‌ ಕೊನೆಯುಸಿರೆಳೆದಿರುವುದು ಕೋಟ್ಯಂತರ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.

1952ರ ಮೇ 29ರಂದು ಅಮರನಾಥನಾಗಿ ಜನಿಸಿದವರು ನಂತರ ಚಿತ್ರರಂಗಕ್ಕೆ ಬಂದ ನಂತರ ಅಂಬರೀಷ್‌ ಆದರು. ಖ್ಯಾತ ಪಿಟೀಲುವಾದಕವಾದ ಪಿಟೀಲು ಚೌಢಯ್ಯ ಅವರ ಮೊಮ್ಮಗನಾಗಿರುವ ಅಂಬರೀಷ್‌ ತಾತನಂತೆ ಮೇರು ಎತ್ತರಕ್ಕೆ ಸಾಗಿದ್ದರು. 

ಅಂಬರೀಷ್‌ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ನನ್ನ ನೆಚ್ಚಿನ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಇಂದು ನನ್ನ ಪಾಲಿಗೆ ಕೆಟ್ಟ ದಿನವಾಗಿದೆ. ಮಂಡ್ಯದಲ್ಲಿ ಬೆಳಗ್ಗೆ ದುರಂತವಾಗಿದ್ದರ ಬೆನ್ನಲ್ಲೇ ಸಂಜೆ ಅಂಬರೀಷ್‌ ನಿಧನ ಬೇಸರ ಮೂಡಿಸಿದೆ. ಭಾನುವಾರ ಬೆಳಗ್ಗೆ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಜನರಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಮೂರು ದಿನಗಳ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿದೆ. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು. ಕುಟುಂಬ ಸದಸ್ಯರು ಬೆಂಗಳೂರಿನಲ್ಲಿಯೇ ಅಂತ್ಯಕ್ರಿಯೆ ನಡೆಸುವ ಕುರಿತು ಚರ್ಚಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರಿಂದ ಅಂಬರೀಷ್‌ ಅಂತಿಮ ದರ್ಶನಕ್ಕೆ ಅನುಕೂಲವಾಗಲೆಂದು ಹೆಚ್ಚುವರಿ ಬಸ್‌ ಸೇವೆ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು. 

ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ನೇಹ, ಕರ್ಣನಂಥ ಗುಣ ಹಾಗೂ ಒರಟುತನದ ಪ್ರೀತಿಯಿಂದ ಎಲ್ಲರಿಗೂ ಮೆಚ್ಚುಗೆಯಾಗಿದ್ದ ಅಂಬರೀಷ್‌ ರೆಬೆಲ್‌ ಸ್ಟಾರ್‌ ಆಗಿಯೇ ಜೀವನ ಸಾಗಿಸಿದ್ದಾರೆ. 

ತ್ರಿಮೂರ್ತಿಗಳಾದ ಡಾ. ರಾಜ್‌ಕುಮಾರ್‌, ಡಾ. ವಿಷ್ಣುವರ್ಧನ್‌ ಮತ್ತು ಅಂಬರೀಷ್‌ ನಿಧನದಿಂದ ಕನ್ನಡ ಚಿತ್ರರಂಗ ನಿಜಕ್ಕೂ ಬಡವಾಗಿದೆ. 

ಕನ್ನಡ ಚಿತ್ರರಂಗ ಮಾತ್ರವಲ್ಲ ಹಿಂದಿ, ತೆಲುಗು, ತಮಿಳು, ಮಲಯಾಳಂ ಎಲ್ಲ ಭಾಷೆಗಳ ನಟರೊಂದಿಗೂ ಆತ್ಮೀಯತೆ ಹೊಂದಿದ್ದ ಅಂಬರೀಷ್‌ ನಿಧನದಿಂದ ಭಾರತದ ಚಿತ್ರರಂಗ ಮೇರು ವ್ಯಕ್ತಿಯನ್ನು ಕಳೆದುಕೊಂಡಿದೆ. 

ವಿಕ್ರಮ್‌ ಆಸ್ಪತ್ರೆಯಿಂದ ರಾತ್ರಿಯೇ ಜೆ.ಪಿ. ನಗರದಲ್ಲಿರುವ ಮನೆಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಬೆಳಗ್ಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. 

ತಮ್ಮದೇ ಆದ ಧಾಟಿ, ಹಾವ ಭಾವಗಳನ್ನು ಹೊಂದಿದ್ದ ಅಂಬರೀಶ್‌ ಆರೋಗ್ಯದಲ್ಲಿ ಕಳೆದ ಕೆಲ ದಿನಗಳಿಂದ ಏರುಪೇರಾಗಿತ್ತು ಎನ್ನಲಾಗಿದೆ. ವಿಚಾರ ತಿಳಿದ ಕೂಡಲೇ ಸಿಎಂ ಎಚ್‌ಡಿ ಕುಮಾರಸ್ವಾಮಿ, ಸಚಿವ ಜಾರ್ಜ್‌, ಚಿತ್ರನಟರಾದ ಪುನೀತ್‌ ರಾಜಕುಮಾರ್‌, ಯಶ್‌ ಇನ್ನಿತರರು ಭೇಟಿ ನೀಡಿದ್ದಾರೆ. 

ಮಂಡ್ಯದ ಗಂಡು ಎಂದೇ ಪ್ರಸಿದ್ಧಿ ಪಡೆದಿದ್ದ ಅಂಬರೀಶ್‌ ಅವರನ್ನು ಬೆಂಬಲಿಗರೆಲ್ಲರೂ ಅಣ್ಣಾ ಎಂದೇ ಕರೆಯುತ್ತಿದ್ದರು. ಅಂಬರೀಶ್‌ ಸಾವಿನ ವಿಚಾರ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯ ಸುತ್ತ ಅಭಿಮಾನಿಗಳು ಜಮಾಯಿಸಿದ್ದಾರೆ. 

ಶಾಸಕರಾಗಿ ಸಂಸದರಾಗಿ ರಾಜ್ಯದ ಹಾಗೂ ಕೇಂದ್ರದ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ. ಚಿತ್ರಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಜನಮೆಚ್ಚಿದ ಜನನಾಯಕ ಎನಿಸಿದ್ದರು. ಶ್ರೀಯುತರ ರೈತಪರ ಕಳಕಳಿ ಅಪರಿಮಿತವಾದುದು. ಸ್ನೇಹಪರರೂ ಕೊಡುಗೈ ದಾನಿಗಳೂ ಆಗಿದ್ದ ಅಂಬರೀಶ್ ರವರು ಸಹ ಕಲಾವಿದರ ಕಷ್ಟಕ್ಕೆ ಸ್ಪಂದಿಸುವ ಕಲಿಯುಗ ಕರ್ಣ ಆಗಿಯೇ ಎಲ್ಲರ ಮನದಲ್ಲಿ ಮನೆ ಮಾಡಿದ್ದರು. 

ಅಂಬಿ ರಾಜಕೀಯ ಜೀವನ 

ಅಂಬರೀಷ್‌ ಅವರು 1998ರಿಂದ 1999, 1999ರಿಂದ 2004 ಮತ್ತು 2004ರಿಂದ 2009ರ ಅವಧಿಯಲ್ಲಿ ಸಂಸದರಾಗಿದ್ದರು. 2006ರಿಂದ 2008ರವರೆಗೆ ಕೇಂದ್ರ ವಾರ್ತಾ ಸಚಿವರಾಗಿದ್ದರು. ಆದರೆ, 2008ರಲ್ಲಿ ಸಂಭವಿಸಿದ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಅಂಬರೀಷ್‌ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ರಾಜ್ಯ ವಸತಿ ಸಚಿವ

2013ರಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಅಂಬರೀಷ್‌ ಅವರು ಮೊದಲ ಬಾರಿ ವಸತಿ ಸಚಿವರಾಗಿ ಕೆಲಸ ಮಾಡಿದರು. ಬಳಿಕ ರಾಜೀನಾಮೆ ನೀಡಬೇಕಾಯಿತು. ಆದರೆ, 2015ರಲ್ಲಿ ವಿಧಾನಸಭೆ ಚುನಾವಣೆಗೆ ಅವರು ಸ್ಪರ್ಧಿಸಲಿಲ್ಲ.