ಮರಾಠಿಗರಿಗೆ ಮಹಾ ಮೀಸಲು ಉಡುಗೊರೆ : ಮಹಾರಾಷ್ಟ್ರ ಸರ್ಕಾರ

0
347

ಮರಾಠಾ ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಗೆ ಲೋಕಸಭೆ ಚುನಾವಣೆಗೂ ಮೊದಲೇ ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ಸಮ್ಮತಿಯ ಮುದ್ರೆ ಒಪ್ಪಿದೆ. ಇದರಿಂದಾಗಿ ಮೀಸಲಾತಿಗೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ಮರಾಠಾ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆಗೆ ಫಲ ದೊರೆತಂತಾಗಿದೆ.

ಮುಂಬೈ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠ ಸಮುದಾಯಕ್ಕೆ ಮೀಸಲು ನೀಡುವುದಕ್ಕಾಗಿ ಪ್ರತ್ಯೇಕ ವರ್ಗವೊಂದನ್ನು ಸೃಷ್ಟಿಸಲು ಮಹಾರಾಷ್ಟ್ರ ಸಚಿವ ಸಂಪುಟ ನವೆಂಬರ್ 18 ರ ಭಾನುವಾರ ನಿರ್ಧರಿಸಿದೆ. ಈ ನಿರ್ಧಾರ ದೇಶವ್ಯಾಪಿ ಪರಿಣಾಮ ಬೀರುವ ಸಾಧ್ಯತೆ ಇದೆ. 

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ (ಎಸ್‌ಇಬಿಸಿ) ಎಂದು ಈ ವರ್ಗವನ್ನು ಗುರುತಿಸಲು ತೀರ್ಮಾನಿಸಲಾಗಿದೆ. 

ಗುಜರಾತ್‌ನಲ್ಲಿ ಪಾಟೀದಾರ್‌ ಮತ್ತು ರಾಜಸ್ಥಾನದಲ್ಲಿ ಗುಜ್ಜರ್‌ ಸಮುದಾಯಗಳು ಮೀಸಲು ಕೇಳುತ್ತಿವೆ. ಈ ಎರಡೂ ರಾಜ್ಯಗಳಲ್ಲಿ ಇದು ಪ್ರಮುಖ ರಾಜಕೀಯ ವಿಚಾರವಾಗಿದೆ. 

ಮಹಾರಾಷ್ಟ್ರ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನ ಅನ್ವಯ ಎಸ್‌ಇಬಿಸಿ ಎಂಬ ವರ್ಗ ಸೃಷ್ಟಿಗೆ ಸಚಿವ ಸಂಪುಟ ನಿರ್ಧರಿಸಿತು. ಆಯೋಗವು ಸರ್ಕಾರಕ್ಕೆ ಕಳೆದ ವಾರ ವರದಿ ನೀಡಿತ್ತು.

‘ಆಯೋಗದ ವರದಿಯಲ್ಲಿ ಮೂರು ಶಿಫಾರಸುಗಳಿದ್ದವು. ಎಸ್‌ಇಬಿಸಿ ಅಡಿಯಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲಾಗುವುದು. ಆಯೋಗದ ಶಿಫಾರಸು ಜಾರಿಗೊಳಿಸಲು ಅಗತ್ಯವಾದ ಶಾಸನಾತ್ಮಕ ಪ್ರಕ್ರಿಯೆ ಪೂರ್ಣಗೊಳಿಸಲು ಸಂಪುಟ ಉಪ
ಸಮಿತಿ ರಚಿಸಲಾಗಿದೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಸಂಪುಟ ಸಭೆಯ ಬಳಿಕ ತಿಳಿಸಿದರು. 

 ಮಹಾರಾಷ್ಟ್ರದಲ್ಲಿ ಮರಾಠರು ಅತ್ಯಂಬ ಪ್ರಭಾವಿ ಸಮುದಾಯ. ರಾಜ್ಯದ ಒಟ್ಟು 11.25 ಕೋಟಿ ಜನಸಂಖ್ಯೆಯಲ್ಲಿ ಈ ಸಮುದಾಯದ ಪಾಲು ಶೇ 33ರಷ್ಟಿದೆ. ಮೀಸಲಾತಿಗಾಗಿ ಕೆಲವು ವರ್ಷಗಳಿಂದ ಮರಾಠರು ಶಾಂತಿಯುತವಾಗಿ ಒತ್ತಾಯಿಸುತ್ತಿದ್ದಾರೆ. ಜುಲೈ–ಆಗಸ್ಟ್‌ನಲ್ಲಿ ಈ ಒತ್ತಾಯ ಹಿಂಸಾತ್ಮಕ ರೂಪ ತಾಳಿತ್ತು.

2014ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌–ಎನ್‌ಸಿಪಿ ಸರ್ಕಾರವು ಮರಾಠ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿ ನೀಡಿತ್ತು. ಆದರೆ, ಬಾಂಬೆ ಹೈಕೋರ್ಟ್‌ ಈ ನಿರ್ಧಾರಕ್ಕೆ ತಡೆ ಕೊಟ್ಟಿದೆ. ನಾಲ್ಕು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ–ಶಿವಸೇನಾ ಸರ್ಕಾರಕ್ಕೆ ಮರಾಠ ಮೀಸಲಾತಿ ಭಾರಿ ಸವಾಲಾಗಿ ಪರಿಣಮಿಸಿತ್ತು. 

ಎಸ್‌ಇಬಿಸಿ ಮತ್ತು ಮರಾಠ ಮೀಸಲು ಬಗ್ಗೆ ಸರ್ಕಾರವು ಕೆಲವೇ ದಿನಗಳಲ್ಲಿ ಮಸೂದೆ ರೂಪಿಸುವ ನಿರೀಕ್ಷೆ ಇದೆ. ಈಗ ಇರುವ ಶೇ 52ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಕ್ರಮವಾಗಿ ಶೇ 13 ಮತ್ತು ಶೇ 7ರಷ್ಟು ಪಾಲು ಹೊಂದಿವೆ. ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 19ರಷ್ಟು ಮೀಸಲಾತಿ ಇದೆ. ಒಬಿಸಿ ಮೀಸಲಾತಿಯಲ್ಲಿಯೇ ಮರಾಠರನ್ನು ಸೇರಿಸುವುದು ರಾಜಕೀಯವಾಗಿ ಚತುರ ನಿರ್ಧಾರ ಆಗದು. ಆ ಕಾರಣಕ್ಕಾಗಿಯೇ ಪ್ರತ್ಯೇಕ ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ.