ಮಂಗಳ ಗ್ರಹದಲ್ಲಿ ಮಂಜುಗಡ್ಡೆ ಪತ್ತೆ

0
19

ಮಂಗಳ ಗ್ರಹದ ಕೆಳಪದರಗಳಲ್ಲಿ ಹಿಮದ ರಾಶಿ ಇರುವುದನ್ನು ನಾಸಾದ ವಿಜ್ಞಾನಿಗಳು ಬಾಹ್ಯಾಕಾಶ ನೌಕೆಯ ನೆರವಿನಿಂದ ಪತ್ತೆ ಮಾಡಿದ್ದಾರೆ. ಮಂಗಳ ಗ್ರಹದ ಎಂಟು ಇಳಿಜಾರು ಪ್ರದೇಶಗಳಲ್ಲಿ ಪತ್ತೆಯಾಗಿರುವ ಮಂಜುಗಡ್ಡೆ ಪದರವು 100 ಮೀಟರ್‌ಗಿಂತಲೂ ಹೆಚ್ಚು ದಪ್ಪವಾಗಿದೆ ಎಂದು ನಾಸಾ ತಿಳಿಸಿದೆ.

ಗ್ರಹದ ಉತ್ತರ ಹಾಗೂ ದಕ್ಷಿಣ ಧ್ರುವಗಳೆರೆಡರಲ್ಲೂ ಹಿಮದ ಪದರವಿದೆ. ಅನೇಕ ವರ್ಷಗಳ ಹಿಂದೆ ಮಂಜಿನ ರೂಪದಲ್ಲಿ ಈ ಹಿಮದ ರಾಶಿ ಸಂಗ್ರಹಗೊಂಡಿದೆ. ಅಡ್ಡಲಾಗಿ ಕತ್ತರಿಸಿದಂತೆ ಕಾಣುವ ಪದರದ ಅಂಚಿನ ಭಾಗವು ತಿಳಿ ನೀರಿನ ರೂಪದಲ್ಲಿದೆ. ಹಿಮಾವೃತ ಕಲ್ಲುಗಳು ಸೇರಿದಂತೆ, ಒಂದೆರೆಡು ಗಜ ಗಾತ್ರದ ಧೂಳಿನಲ್ಲಿ ಈ ಭಾಗ ಮುಚ್ಚಿಹೋದಂತೆ ಕಂಡುಬರುತ್ತದೆ ಎಂದು ನಾಸಾ ಹೇಳಿದೆ.

ಹೊಸ ಅಧ್ಯಯನವು, ಮಂಗಳ ಗ್ರಹದ ಹವಾಮಾನದ ಇತಿಹಾಸದ ಬಗ್ಗೆ ಸುಳಿವು ನೀಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮುಂದೆ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಈ ಅಧ್ಯಯನ ಖಂಡಿತ ನೆರವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.