ಭೂ ಪರಿವರ್ತನೆಯ ಆನ್‌ಲೈನ್ ವ್ಯವಸ್ಥೆಗೆ : ಕರ್ನಾಟಕ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಚಾಲನೆ

0
433

ಕೃಷಿಯೇತರ ಉದ್ದೇಶಗಳಿಗೆ ಕೃಷಿ ಭೂಮಿ ಪರಿವರ್ತನೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಪ್ರಮಾಣಪತ್ರ ಆಧಾರಿತ ಆನ್‌ಲೈನ್ ಭೂ ಪರಿವರ್ತನೆ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.

ಬೆಂಗಳೂರು: ಕೃಷಿಯೇತರ ಉದ್ದೇಶಗಳಿಗೆ ಕೃಷಿ ಭೂಮಿ ಪರಿವರ್ತನೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಪ್ರಮಾಣಪತ್ರ ಆಧಾರಿತ ಆನ್‌ಲೈನ್ ಭೂ ಪರಿವರ್ತನೆ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.

ಆನ್‌ಲೈನ್ ಸೇವೆಗೆ ಫೆಬ್ರುವರಿ 20 ರ ಬುಧವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ‘ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ವಿಳಂಬ ತಪ್ಪಿಸಿ, ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೊದಲ ಬಾರಿಗೆ ಈ ಪದ್ಧತಿ ಜಾರಿಗೆ ತರಲಾಗುತ್ತಿದೆ’ ಎಂದರು.

‘ಭೂ ಪರಿವರ್ತನೆಗಾಗಿ ಭೂ ಮಾಲೀಕರು ಪದೇ ಪದೇ ಕಂದಾಯ ಇಲಾಖೆಗೆ ಅಲೆಯಬೇಕಿತ್ತು. ಅಲ್ಲದೆ, ಆರು ತಿಂಗಳಿಗೂ ಹೆಚ್ಚು ವಿಳಂಬವಾಗುತ್ತಿತ್ತು. ನೂತನ ಪದ್ಧತಿಯಡಿ ಕೇವಲ ಎರಡು ತಿಂಗಳಲ್ಲಿ ಭೂ ಪರಿವರ್ತನೆ ಮಾಡಿಕೊಳ್ಳಬಹುದು’ ಎಂದರು.

‘ಭೂ ಪರಿವರ್ತನೆಗೆ 15ರಿಂದ 20 ದಾಖಲೆಗಳನ್ನು ಒದಗಿಸಬೇಕಾಗಿತ್ತು. ಇದೀಗ ಅರ್ಜಿದಾರರು ಪ್ರಮಾಣಪತ್ರದ ಜತೆಗೆ ಇತ್ತೀಚಿನ ಪಹಣಿ, ಮ್ಯುಟೇಷನ್ ಪ್ರತಿ ಮತ್ತು ಒಂದು ಸರ್ವೆ ನಂಬರ್‌ನಲ್ಲಿ ಭಾಗಶಃ ಭೂ ಪರಿವರ್ತನೆಗೆ ವಿನಂತಿಸಿದ ಸಂದರ್ಭದಲ್ಲಿ ಮಾತ್ರ ನಕ್ಷೆ ಒದಗಿಸಬೇಕು’ ಎಂದು ಮಾಹಿತಿ ನೀಡಿದರು.

ಆನ್‌ಲೈನ್ ಪ್ರಕ್ರಿಯೆಗೆ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ. ಅರ್ಜಿ ಸಲ್ಲಿಸಿದ ಒಂದು ವಾರದ ಒಳಗಾಗಿ ಪ್ರಮಾಣ ಪತ್ರದ ಮೂಲ ಪ್ರತಿಯನ್ನು ಸಂಬಂಧಪಟ್ಟ ತಹಶೀಲ್ದಾರ್ ಕಚೇರಿ ಅಥವಾ ಜಿಲ್ಲಾಧಿಕಾರಿಗಳ ಕಚೇರಿಯ ಅರ್ಜಿ ಸ್ವೀಕೃತಿ ಕೇಂದ್ರಕ್ಕೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ತಹಶೀಲ್ದಾರರು ತಮ್ಮ ಕಚೇರಿಯಲ್ಲಿ ಸ್ವೀಕೃತಗೊಂಡ ಪ್ರಮಾಣಪತ್ರಗಳ ಮೂಲಪ್ರತಿಗಳನ್ನು 48 ಗಂಟೆಯೊಳಗೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಈ ಭೂ ಪರಿವರ್ತನಾ ಆದೇಶ ಅಥವಾ ಹಿಂಬರಹವನ್ನು ಅರ್ಜಿದಾರರು ಇಲಾಖೆಯ ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅವಧಿ ವಿಸ್ತರಣೆ: ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ವಾಸ ಮಾಡುತ್ತಿರುವವರು 94 ‘ಸಿ’ ಮತ್ತು 94 ‘ಸಿಸಿ’ ಅಡಿಯಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಗಡುವನ್ನು 2019ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಇದೇ ವೇಳೆ ಬಗರ್ ಹುಕುಂ ಸಾಗುವಳಿಯಡಿ 50 ಮತ್ತು 53 ಅರ್ಜಿ ಸಲ್ಲಿಸಲು 2020ರ ಏಪ್ರಿಲ್ 26ರವರೆಗೆ ಅವಧಿ ವಿಸ್ತರಿಸಲಾಗಿದೆ.

ಬಗರ್ ಹುಕುಂ ಅಡಿ 50 ಮತ್ತು 53 ಅರ್ಜಿ ಸಲ್ಲಿಸಲು ವಿಫಲರಾದ ಅರ್ಹ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಲು ನಮೂನೆ 57ರಲ್ಲಿ ಅವಕಾಶ ಹಾಗೂ ನಮೂನೆ 57 ಮತ್ತು 58ರಡಿ ಅರ್ಜಿ ಸಲ್ಲಿಸಲು 2019ರ ಮಾರ್ಚ್ 16ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಭೂ ಪರಿವರ್ತನೆ ಅರ್ಜಿ ಸಲ್ಲಿಕೆ– ಆದೇಶ ಹೇಗೆ?

* ಇಲಾಖೆ ಜಾಲತಾಣದಲ್ಲಿ (landrecords.karnataka.gov.in) ಯೂಸರ್ ಐಡಿ ಸೃಜಿಸಬೇಕು

* ಪ್ರಮಾಣಪತ್ರ ಜನರೇಷನ್ ಲಿಂಕ್‌ಗೆ ಮಾಹಿತಿ ತುಂಬಿ ಸಿಸ್ಟಂ ಜನರೇಟೆಡ್ ಪ್ರಮಾಣಪತ್ರ ಪಡೆಯಬೇಕು

*  200 ಮೌಲ್ಯದ ಛಾಪಾ ಕಾಗದದಲ್ಲಿ ಸಿಸ್ಟಂ ಜನರೇಟೆಡ್ ಪ್ರಮಾಣಪತ್ರ ಮುದ್ರಿಸಿ ನೋಟರಿ ದೃಡೀಕರಿಸಬೇಕು

* ಬಳಿಕ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು

* ಸ್ವೀಕೃತವಾದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಆನ್‌ಲೈನ್‌ನಲ್ಲಿ ವರ್ಗಾಯಿಸಲಾಗುತ್ತದೆ

* ತಿಂಗಳ ಒಳಗೆ ವರದಿ ಬಾರದಿದ್ದರೆ ಆಕ್ಷೇಪ ಇಲ್ಲವೆಂದು ಪರಿಗಣಿಸಿ, ನಿಗದಿತ ಶುಲ್ಕ ವಿಧಿಸಿ ಭೂಪರಿವರ್ತನೆಗೆ ಕ್ರಮ

* 60 ದಿನಗಳ ಒಳಗೆ ಜಿಲ್ಲಾಧಿಕಾರಿ ಡಿಜಿಟಲ್‌ ಸಹಿ ಹೊಂದಿದ ಭೂ ಪರಿವರ್ತನಾ ಆದೇಶ ಲಭ್ಯ