“ಭಾರತ ರತ್ನ” ತಿರಸ್ಕರಿಸಿದ ಭೂಪೇನ್​ ಹಜಾರಿಕ ಪುತ್ರ ತೇಜ್​ ಹಜಾರಿಕ

0
997

ಅಸ್ಸಾಮಿ ಗಾಯನ ಕ್ಷೇತ್ರದ ದಂತಕತೆ ಭೂಪೇನ್​ ಹಜಾರಿಕ ಅವರಿಗೆ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಘೋಷಿಸಿದ್ದ ಮರಣೋತ್ತ ಭಾರತ ರತ್ನ ಗೌರವವನ್ನು ಅವರ ಪುತ್ರ ತೇಜ್​ ಹಜಾರಿಕ ಅವರು ತಿರಸ್ಕರಿಸಿದ್ದಾರೆ.

ಗುವಾಹಟಿ: ಅಸ್ಸಾಮಿ ಗಾಯನ ಕ್ಷೇತ್ರದ ದಂತಕತೆ ಭೂಪೇನ್​ ಹಜಾರಿಕ ಅವರಿಗೆ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಘೋಷಿಸಿದ್ದ ಮರಣೋತ್ತರ ಭಾರತ ರತ್ನ ಗೌರವವನ್ನು ಅವರ ಪುತ್ರ ತೇಜ್​ ಹಜಾರಿಕ ಅವರು ತಿರಸ್ಕರಿಸಿದ್ದಾರೆ. 

ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕೆಗೆ ಗುರಿಪಡಿಸಿರುವ ತೇಜ್​ ಹಜಾರಿಕ, ಪೌರತ್ವ ಮಸೂದೆ 2016 ಅನ್ನು ತಿದ್ದುಪಡಿ ಮಾಡ ಹೊರಟಿರುವುದು ಕೇಂದ್ರದ ಅತ್ಯಂತ ಕೆಟ್ಟ ನಡೆ. ಈ ತಿದ್ದುಪಡಿ ಮೂಲಕ ಕೇಂದ್ರ ಸರ್ಕಾರವು ನಮ್ಮ ತಂದೆಯ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ. ನಮ್ಮ ತಂದೆಗೆ ಗೌರವ ಸಲ್ಲಿಸುವ ಕೇಂದ್ರದ ನಡೆ ಕೇವಲ ಅಗ್ಗದ ಪ್ರಚಾರ ತಂತ್ರ ಎಂದು ಕಿಡಿ ಕಾರಿದ್ದಾರೆ. 

ಸದ್ಯ ಅಮೆರಿಕದಲ್ಲಿ ನೆಲೆಸಿರುವ ತೆಜ್​ ಹಜಾರಿಕ ಅಲ್ಲಿಂದಲೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ” ಪೌರತ್ವ ಮಸೂದೆ 2016ರ ತಿದ್ದುಪಡಿಯು ನೋವಿನಿಂದ ಕೂಡಿದ ಜನವಿರೋಧಿ ಮಸೂದೆ. ಕೇಂದ್ರದ ಈ ನಿರ್ಧಾರ ನನ್ನನ್ನು ಬೇಸರಕ್ಕೆ ತಳ್ಳಿದೆ. ಅಲ್ಲದೆ, ಈ ತಿದ್ದುಪಡಿ ಮಸೂದೆಯು ನಮ್ಮ ತಂದೆಯ ನಂಬಿಕೆ, ನಿಲುವುಗಳಿಗೆ ವಿರುದ್ಧವಾದದ್ದು,” ಎಂದು ಅವರು ಹೇಳಿದ್ದಾರೆ. 

ನನ್ನ ತಂದೆಗೆ ಸಿಕ್ಕ ಈ ಪ್ರಶಸ್ತಿಯನ್ನು ತಿರಸ್ಕರಿಸಲು ನನಗೆ ಕಾರಣಗಳಿವೆ. ಪ್ರಶಸ್ತಿಗೆ ಸಂಬಂಧಿಸಿದಂತೆ ನಮ್ಮ ಕುಟುಂಬಕ್ಕೆ ಈ ವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಆಮಂತ್ರಣವೂ ಬಂದಿಲ್ಲ. ಹೀಗಾಗಿ ತಿರಸ್ಕರಿಸಲು ಇಲ್ಲೇನೂ ಉಳಿದಿಲ್ಲ. ಈ ವಿಚಾರದಲ್ಲಿ ಕೇಂದ್ರ ನಡೆದುಕೊಳ್ಳುತ್ತಿರುವ ರೀತಿಯು ಪ್ರಶಸ್ತಿ ಪ್ರದಾನ ಪ್ರಕ್ರಿಯೆ ಮತ್ತು ಸ್ವೀಕಾರಕ್ಕಿರುವ ಗೌರವವನ್ನು ಹಾಳುಗೆಡವಲಿದೆ. ಇದು ಕೇವಲ ಪ್ರಚಾರ ತಂತ್ರ ಮಾತ್ರ ಎಂದು ತೇಜ್​ ಹಜಾರಿಕ ಅತ್ಯಂತ ಕಟು ಶಬ್ಧಗಳಿಗಂದ ಟೀಕೆ ಮಾಡಿದ್ದಾರೆ. 

ಇತ್ತೀಚೆಗೆ ಕೇಂದ್ರ ಸರ್ಕಾರ ಮೂವರು ಸಾಧಕರಿಗೆ ಭಾರತ ರತ್ನ ಗೌರವ ಪ್ರಕಟಿಸಿತ್ತು. ಅದರಲ್ಲಿ ಅಸ್ಸಾಮಿ ಗಾಯಕ ಭೂಪೇನ್​ ಹಜಾರಿಕ ಅವರಿಗೂ ಮರಣೋತ್ತರ ಭಾರತ ರತ್ನ ಪ್ರಾಪ್ತವಾಗಿತ್ತು.