ಭಾರತ ಮೂಲದ ಅಭಿಜಿತ್‌ ಸೇರಿ ಮೂವರಿಗೆ 2019 ರ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ

0
49

ಭಾರತದಲ್ಲಿ ಹುಟ್ಟಿ ಬೆಳೆದು ಈಗ ಅಮೆರಿಕ ಪ್ರಜೆಯಾಗಿರುವ ಅಭಿಜಿತ್‌ ಬ್ಯಾನರ್ಜಿ (58), ಅವರ ಹೆಂಡತಿ ಎಸ್ತರ್‌ ಡಫ್ಲೊ (46) ಮತ್ತು ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ ಅವರು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಸ್ಟಾಕ್‌ಹೋಮ್‌ (ಪಿಟಿಐ): ಭಾರತದಲ್ಲಿ ಹುಟ್ಟಿ ಬೆಳೆದು ಈಗ ಅಮೆರಿಕ ಪ್ರಜೆಯಾಗಿರುವ ಅಭಿಜಿತ್‌ ಬ್ಯಾನರ್ಜಿ (58), ಅವರ ಹೆಂಡತಿ ಎಸ್ತರ್‌ ಡಫ್ಲೊ (46) ಮತ್ತು ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ ಅವರು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಇವರು ತೋರಿಸಿಕೊಟ್ಟ ಪ್ರಾಯೋಗಿಕ ಧೋರಣೆಗಾಗಿ ಪ್ರಶಸ್ತಿಯ ಗೌರವ ಸಂದಿದೆ.

ಬ್ಯಾನರ್ಜಿ ಮತ್ತು ಡಫ್ಲೊ ಅವರಿಬ್ಬರೂ ಅಮೆರಿಕದ ಮೆಸ್ಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ (ಎಂಐಟಿ) ಪ್ರಾಧ್ಯಾಪಕರು. 

ಡಫ್ಲೊ ಅವರು ಅರ್ಥಶಾಸ್ತ್ರದಲ್ಲಿ ಈ ಪ್ರಶಸ್ತಿ ಪಡೆದ ಎರಡನೇ ಮಹಿಳೆ. ಅಷ್ಟೇ ಅಲ್ಲ, ಈ ‍ಕ್ಷೇತ್ರದಲ್ಲಿ ಈ ಪ‍್ರಶಸ್ತಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ. 

ಕೋಲ್ಕತ್ತದಲ್ಲಿ ಜನಿಸಿದ ಅಭಿಜಿತ್‌ ಅವರು ಅಲ್ಲಿನ ವಿಶ್ವವಿದ್ಯಾಲಯ ಅಲ್ಲದೆ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್‌ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರು. 1998ರಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿದ್ದಾರೆ.

2003ರಲ್ಲಿ ಅಭಿಜಿತ್‌ ಅವರು ಎಸ್ತರ್‌ ಡಫ್ಲೊ ಮತ್ತು ಸೆಂಥಿಲ್‌ ಮುಲೈನಾಥನ್‌ ಅವರೊಂದಿಗೆ  ಸೇರಿ ದಿ ಅಬ್ದುಲ್‌ ಲತೀಫ್‌ ಜಮೀಲ್‌ ಪಾವರ್ಟಿ ಆ್ಯಕ್ಷನ್‌ ಲ್ಯಾಬ್‌  ಸ್ಥಾಪಿಸಿದ್ದರು. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯ ಉನ್ನತ ಮಟ್ಟದ ಸಮಿತಿಯಲ್ಲೂ ಅಭಿಜಿತ್‌ ಕಾರ್ಯನಿರ್ವಹಿಸಿದ್ದರು. ಪ್ರಶಸ್ತಿಯು 90 ಲಕ್ಷ ಕ್ರೊನಾರ್‌ (ಸುಮಾರು 6.5 ಕೋಟಿ) ನಗದನ್ನು ಒಳಗೊಂಡಿದೆ.

ಬಡತನ ನಿರ್ಮೂಲನೆಯ ಕೆಲಸ

‘ಜಾಗತಿಕ ಮಟ್ಟದಲ್ಲಿ ಬಡತನದ ನಿರ್ಮೂಲನೆಯ ನಮ್ಮ ಸಾಮರ್ಥ್ಯವನ್ನು ಈ ವರ್ಷ ಪ್ರಶಸ್ತಿ ಪಡೆದವರ ಸಂಶೋಧನೆಯು ಗಣನೀಯವಾಗಿ ಹೆಚ್ಚಿಸಿದೆ. ಅವರ ಪ್ರಯೋಗ ಆಧಾರಿತ ಧೋರಣೆಯು ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಎರಡೇ ದಶಕಗಳಲ್ಲಿ ದೊಡ್ಡ ಪರಿವರ್ತನೆ ಉಂಟು ಮಾಡಿದೆ. ಅಭಿವೃದ್ಧಿ ಅರ್ಥಶಾಸ್ತ್ರವು ಈಗ ಹುಲುಸಾಗಿ ಬೆಳೆಯುತ್ತಿರುವ ಸಂಶೋಧನಾ ವಿಭಾಗವಾಗಿದೆ’ ಎಂದು ಪ್ರಶಸ್ತಿ ಘೋಷಿಸಿದ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್ ಸೈನ್ಸಸ್‌ ಹೇಳಿದೆ. 

ಈ ಮೂವರು ಪರಿಚಯಿಸಿದ ಹೊಸ ಧೋರಣೆಯು ಬಡತನ ನಿರ್ಮೂಲನೆಗೆ ವಿಶ್ವಾಸಾರ್ಹ ಉತ್ತರಗಳನ್ನು ಕೊಡುತ್ತದೆ ಎಂದೂ ತಿಳಿಸಿದೆ. 

ಇವರ ಒಂದು ಪ್ರಯೋಗದಿಂದಾಗಿ ಭಾರತದ 50 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಮಕ್ಕಳಿಗೆ ಪರಿಹಾರ ಬೋಧನೆಯ ಪ್ರಯೋಜನ ಪಡೆಯಲು ಸಾಧ್ಯವಾಗಿದೆ. ಅನಾರೋಗ್ಯ ತಡೆಗಾಗಿ ಭಾರಿ ಸಹಾಯಧನಗಳ ಯೋಜನೆಯು ಹಲವು ದೇಶಗಳಲ್ಲಿ ಜಾರಿಯಾಗಿದೆ. ಇದು ಇನ್ನೊಂದು ಉದಾಹರಣೆ ಎಂದು ಅಕಾಡೆಮಿ ಹೇಳಿದೆ.

ಮೊದಲ ದಂಪತಿ

ಸ್ಟಾಕ್‌ಹೋಮ್ (ಪಿಟಿಐ): ಅಭಿಜಿತ್‌ ಬ್ಯಾನರ್ಜಿ ಮತ್ತು ಪತ್ನಿ ಎಸ್ತರ್‌ ಡಫ್ಲೊ (ಫ್ರೆಂಚ್‌– ಅಮೆರಿಕನ್‌) 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ಗೆ ಆಯ್ಕೆಯಾಗಿದ್ದಾರೆ. ಪತಿ–ಪತ್ನಿ ಒಂದೇ ವರ್ಷದಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪಡೆದಿದ್ದು ಇದೇ ಮೊದಲು.

46 ವರ್ಷದ ಡಫ್ಲೊ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಸಲಹೆಗಾರರಾಗಿದ್ದರು. ಅರ್ಥಶಾಸ್ತ್ರಕ್ಕಾಗಿ ನೊಬೆಲ್‌ ಪಡೆದ ಎರಡನೆಯ ಮಹಿಳೆ ಮಾತ್ರವಲ್ಲದೆ ಈ ಪ್ರಶಸ್ತಿ ಪಡೆದ ಅತಿ ಕಿರಿಯ ಮಹಿಳೆ ಎನಿಸಿದ್ದಾರೆ.

ಅಭಿಜಿತ್‌ ಬ್ಯಾನರ್ಜಿ ಸಾಧನೆಯ ಹಿನ್ನೋಟ

# ಮುಂಬೈನಲ್ಲಿ ಜನನ

# ಕೋಲ್ಕತ್ತಾದ ಸೌತ್ ಪಾಯಿಂಟ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣ

# 1981 ರಲ್ಲಿ ಪ್ರೆಸಿಡೆನ್ಸಿ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ

# 1988 ರಲ್ಲಿ ಹಾರ್ವರ್ಡ್ ವಿ.ವಿ. ಯಿಂದ ಪಿ.ಎಚ್.ಡಿ

# ಮೆಸಾಚುಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಈಗ ಪ್ರಾಧ್ಯಾಪಕ

# ತನ್ನೊಂದಿಗೆ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ಪತ್ನಿ ಡಫ್ಲೊ  ಜೊತೆ ಸೇರಿ ಅಭಿಜಿತ್ ಅವರು ಬಡತನ ನಿರ್ಮೂಲನೆಗಾಗಿ ಕೋಲ್ಕತ್ತಾದ ಬಂಧನ್ ಬ್ಯಾಂಕ್ ಪರವಾಗಿ “ಟಾರ್ಗೆಟಿಂಗ್ ಹಾರ್ಡ್ ಕೋರ್ ಪೂರ್” ಎಂಬ ಯೋಜನೆ ರೂಪಿಸಿ ಕೆಲಸ ಮಾಡಿದ್ದರು.

# 2003 ರಲ್ಲಿ ಪತ್ನಿ ಡಫ್ಲೊ  ಜೊತೆ ಸೇರಿ ಅಭಿಜಿತ್ “ಅಬ್ದುಲ್ ಲತೀಫ್ ಜಮೀಲ್  ಪವರ್ಟಿ” ಲ್ಯಾಬ್ ಆರಂಭಿಸಿದ್ದರು.