ಭಾರತ ಫುಟ್‌ಬಾಲ್‌ ತಂಡದ ಕೋಚ್‌ ಹುದ್ದೆ ತೊರೆದ ಕಾನ್‌ಸ್ಟೆಂಟೈನ್‌(ಏಷ್ಯಾ ಕಪ್‌ನಲ್ಲಿ ನಾಕೌಟ್‌ ಪ್ರವೇಶಿಸಲು ವಿಫಲವಾದ ಭಾರತ)

0
486

ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಕಾನ್‌ಸ್ಟೆಂಟೈನ್‌ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶಾರ್ಜಾ (ಪಿಟಿಐ): ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಕಾನ್‌ಸ್ಟೆಂಟೈನ್‌ 2019 ಜನೇವರಿ 15 ರ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಭಾರತ ತಂಡ ಈ ಬಾರಿಯ ಎಎಫ್‌ಸಿ ಏಷ್ಯಾಕಪ್‌ನಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ಇದರಿಂದ ಬೇಸರಗೊಂಡು ಅವರು ಹುದ್ದೆ ತೊರೆದಿದ್ದಾರೆ ಎನ್ನಲಾಗಿದೆ. ಸ್ಟೀಫನ್ ಅವರ ರಾಜೀನಾಮೆಯನ್ನು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಅಂಗೀಕರಿಸಿದೆ.

ಸೋಮವಾರ ರಾತ್ರಿ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ 0–1 ಗೋಲಿನಿಂದ ಬಹರೇನ್‌ ಎದುರು ಸೋತಿತ್ತು. 90ನೇ ನಿಮಿಷದಲ್ಲಿ ತಂಡ ಎದುರಾಳಿಗಳಿಗೆ ಪೆನಾಲ್ಟಿ ಬಿಟ್ಟುಕೊಟ್ಟಿತ್ತು. ಇದು ಪ್ರಣಯ್‌ ಹಲ್ದಾರ್‌ ಬಳಗಕ್ಕೆ ಮುಳುವಾಗಿ ಪರಿಣಮಿಸಿತ್ತು.

‘ನಾಲ್ಕು ವರ್ಷಗಳ ಕಾಲ ಭಾರತ ತಂಡದ ಮುಖ್ಯಕೋಚ್‌ ಆಗಿ ಕೆಲಸ ಮಾಡಿದ್ದೇನೆ. ಈ ಅವಧಿಯಲ್ಲಿ ತಂಡವನ್ನು ಬಲಪಡಿಸಲು ಸಾಕಷ್ಟು ಶ್ರಮಿಸಿದ್ದೇನೆ. ಎಎಫ್‌ಸಿ ಏಷ್ಯಾಕಪ್‌ಗೆ ತಂಡ ಅರ್ಹತೆ ಗಳಿಸಬೇಕೆಂಬುದು ನನ್ನ ಕನಸಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ್ದೆ. ಆ ಕನಸು ಈ ಬಾರಿ ಸಾಕಾರಗೊಂಡಿತು. ತಂಡದಲ್ಲಿದ್ದ ಎಲ್ಲಾ ಆಟಗಾರರ ‍ಪರಿಶ್ರಮದಿಂದ ಇದು ಸಾಧ್ಯವಾಯಿತು. ಇದಕ್ಕಾಗಿ ಎಲ್ಲರಿಗೂ ಆಭಾರಿಯಾಗಿದ್ದೇನೆ’ ಎಂದು ಕಾನ್‌ಸ್ಟೆಂಟೈನ್‌ ಭಾವುಕರಾಗಿ  ನುಡಿದಿದ್ದಾರೆ.

‘ಕೋಚ್‌ ಆಗಿ ಅಧಿಕಾರವಹಿಸಿಕೊಂಡಾಗ ಏನಂದುಕೊಂಡಿದ್ದೆನೊ ಅವುಗಳನ್ನೆಲ್ಲಾ ಸಾಧಿಸಿದ ತೃಪ್ತಿ ಇದೆ. ಈಗ ಹುದ್ದೆ ತೊರೆಯುವ ಸಮಯ ಸನ್ನಿಹಿತವಾಗಿದೆ. ಇದು ಅತ್ಯಂತ ಕಠಿಣ ನಿರ್ಧಾರ. ತುಂಬಾ ನೋವಿನಿಂದಲೇ ಈ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಹೇಳಿದ್ದಾರೆ.

 ಕಾನ್‌ಸ್ಟೆಂಟೈನ್‌ ಅವರು 2002ರಿಂದ 2005ರವರೆಗೆ ಮೊದಲ ಬಾರಿಗೆ ಭಾರತ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು. ಬಳಿಕ ನೆದರ್ಲೆಂಡ್ಸ್‌ನ ವಿಮ್‌ ಕೋವರ್ಸ್‌ಮನ್‌ ಅವರು ಈ ಹುದ್ದೆ ಅಲಂಕರಿಸಿದ್ದರು. ಕೋವರ್ಸ್‌ಮನ್‌ ಅವರ ಅವಧಿ ಮುಗಿದ ನಂತರ ಎಐಎಫ್‌ಎಫ್‌ ಎರಡನೇ ಅವಧಿಗೆ (2015ರಲ್ಲಿ) ಕಾನ್‌ಸ್ಟೆಂಟೈನ್‌ ಅವರನ್ನು ಕೋಚ್‌ ಆಗಿ ನೇಮಿಸಿತ್ತು.

ಕಾನ್‌ಸ್ಟೆಂಟೈನ್‌ ಅವರು ಕೋಚ್‌ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಫಿಫಾ ರ‍್ಯಾಂಕಿಂಗ್‌ನಲ್ಲಿ 173ನೇ ಸ್ಥಾನದಲ್ಲಿದ್ದ ಭಾರತ, ನಂತರ ಹಲವು ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ 93ನೇ ಸ್ಥಾನಕ್ಕೇರಿದ ಸಾಧನೆ ಮಾಡಿತ್ತು.

‘ಹಿಂದಿನ ಆರು ವರ್ಷಗಳಿಂದ ಕುಟುಂಬದಿಂದ ದೂರ ಉಳಿದಿದ್ದೇನೆ. ಮೂರು ಇಲ್ಲವೇ ನಾಲ್ಕು ತಿಂಗಳಿಗೊಮ್ಮೆ ಹೆಂಡತಿ ಮಕ್ಕಳ ಮುಖ ನೋಡುತ್ತಿದ್ದೆ. ಈಗ ಅವರೊಂದಿಗೆ ಹೆಚ್ಚಿನ ಸಮಯ ಕಳೆಯಲು ನಿರ್ಧರಿಸಿದ್ದೇನೆ’ ಎಂದು ಸ್ಟೀಫನ್‌ ತಿಳಿಸಿದ್ದಾರೆ.

‘ಸ್ಟೀಫನ್‌ ಅವರು ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಭಾರತದ ಫುಟ್‌ಬಾಲ್‌ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಯನ್ನು ಗೌರವಿಸುತ್ತೇವೆ’ ಎಂದು ಎಐಎಫ್‌ಎಫ್‌ ಮಹಾ ಕಾರ್ಯದರ್ಶಿ ಕುಶಾಲ್‌ ದಾಸ್‌ ಟ್ವೀಟ್‌ ಮಾಡಿದ್ದಾರೆ.

ಸ್ಟೀಫನ್‌ ಅವರ ಜೊತೆಗಿನ ಒಪ್ಪಂದದ ಅವಧಿ ಜನವರಿ 31ಕ್ಕೆ ಅಂತ್ಯಗೊಳ್ಳಬೇಕಿತ್ತು. ಆಟಗಾರರ ಜೊತೆಗಿನ ಸಂಬಂಧ ಹಳಸಿದ್ದರಿಂದ ಅವರು ಮುಂಚಿತವಾಗಿಯೇ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಸುನಿಲ್‌ ಚೆಟ್ರಿ ಸೇರಿದಂತೆ ತಂಡದಲ್ಲಿದ್ದ ಕೆಲ ಆಟಗಾರರು ಸ್ಟೀಫನ್‌ ಅವರ ತರಬೇತಿ ವಿಧಾನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದೂ ಹೇಳಲಾಗಿದೆ.