ಭಾರತ ಫುಟ್‌ಬಾಲ್‌ ತಂಡಕ್ಕೆ “ಇಗೊರ್‌ ಸ್ಟಿಮ್ಯಾಕ್” ಕೋಚ್‌

0
17

ಕ್ರೊವೇಷ್ಯಾ ಫುಟ್‌ಬಾಲ್ ತಂಡದ ಮಾಜಿ ಕೋಚ್‌ ಇಗೊರ್‌ ಸ್ಟಿಮ್ಯಾಕ್ ಅವರು ಭಾರತ ಫುಟ್‌ಬಾಲ್‌ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ನವದೆಹಲಿ (ಪಿಟಿಐ):ಕ್ರೊವೇಷ್ಯಾ ಫುಟ್‌ಬಾಲ್ ತಂಡದ ಮಾಜಿ ಕೋಚ್‌ ಇಗೊರ್‌ ಸ್ಟಿಮ್ಯಾಕ್ ಅವರು ಭಾರತ ಫುಟ್‌ಬಾಲ್‌ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ಮೊದಲಿದ್ದ  ಭಾರತ ಫುಟ್‌ಬಾಲ್‌ ತಂಡದ ಕೋಚ್ : ಭಾರತ ತಂಡ ಏಷ್ಯಾಕಪ್‌ ಟೂರ್ನಿಯಿಂದ ಹೊರಬಿದ್ದ ಬಳಿಕ, ಆಗ ಕೋಚ್ ಆಗಿದ್ದ ಸ್ಟೀಫನ್‌ ಕಾನ್‌ಸ್ಟಂಟೈನ್‌ ಹುದ್ದೆ ತೊರೆದಿದ್ದರು.

ಆ ಸ್ಥಾನಕ್ಕಾಗಿ ಕೆಲವು ದಿನಗಳಿಂದ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಇದೀಗ ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.

‘ರಾಷ್ಟ್ರೀಯ ತಂಡದ ಕೋಚ್‌ ಹುದ್ದೆಗೆ ಸ್ಟಿಮ್ಯಾಚ್ ಸೂಕ್ತ ಆಯ್ಕೆ. ಭಾರತ ತಂಡ ಬದಲಾವಣೆ ಕಾಣುತ್ತಿದೆ. ಅವರ ಅಪಾರ ಅನುಭವವು ತಂಡದ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಅಧ್ಯಕ್ಷ ಪ್ರಫುಲ್‌ ಪಟೇಲ್‌ ಹೇಳಿದ್ದಾರೆ.

2014ರ ಬ್ರೆಜಿಲ್‌ ವಿಶ್ವಕಪ್‌ಗೆ ನಡೆದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕ್ರೊವೇಷ್ಯಾ ತಂಡವನ್ನು ಸ್ಟಿಮ್ಯಾಚ್ ಕೋಚ್ ಆಗಿ ಮುನ್ನಡೆಸಿದ್ದರು. ಭಾರತ ತಂಡಕ್ಕೆ ಆಯ್ಕೆಯಾಗುವ ಮೊದಲು ಕತಾರ್‌ನ ಅಲ್‌–ಶಹಾನಿಯಾ ಫುಟ್‌ಬಾಲ್‌ ಕ್ಲಬ್‌ಗೆ ಅವರು ತರಬೇತಿ ನೀಡಿದ್ದರು. 

ಸ್ಟಿಮ್ಯಾಕ್ ಕುರಿತು ಒಂದಷ್ಟು ಮಾಹಿತಿ

1967ರಲ್ಲಿ ಯುಗೋಸ್ಲಾವಿಯಾದಲ್ಲಿ ಜನಿಸಿದಸ್ಟಿಮ್ಯಾಕ್, ಕ್ರೊವೇಷ್ಯಾ ರಾಷ್ಟ್ರೀಯ ತಂಡವನ್ನು 53 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. 1998ರಲ್ಲಿ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಕ್ರೊವೇಷ್ಯಾ ತಂಡ ಕಂಚಿನ ಪದಕ ಗಳಿಸಿತ್ತು. ಆ ತಂಡದಲ್ಲಿ ಸ್ಟಿಮ್ಯಾಚ್ ಆಡಿದ್ದರು. ಇದಕ್ಕೂ ಮೊದಲು 1987ರಲ್ಲಿ ಯುಗೋಸ್ಲಾವಿಯಾದ 20 ವರ್ಷದೊಳಗಿನ ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ತಂಡವು ಚಿಲಿಯಲ್ಲಿ ನಡೆದ ಫಿಫಾ ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಧರಿಸಿತ್ತು. ಡಿಫೆಂಡರ್‌ ಆಗಿದ್ದ ಅವರು ಹಾಜುಚ್ ಸ್ಪ್ಲಿಟ್‌, ಸ್ಪೇನ್‌ನ ಕ್ಯಾಡಿಜ್‌, ಇಂಗ್ಲೆಂಡ್‌ನ ಡರ್ಬಿ ಕಂಟ್ರಿ ಹಾಗೂ ವೆಸ್ಟ್‌ ಹ್ಯಾಮ್‌ ಯುನೈಟೆಡ್‌ ಕ್ಲಬ್‌ಗಳನ್ನು ಪ್ರತಿನಿಧಿಸಿದ್ದರು. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಎರಡು ಗೋಲುಗಳನ್ನು ಅವರು ಗಳಿಸಿದ್ದರು.

1996ರಲ್ಲಿ ಯುರೋ ಕಪ್‌ ಹಾಗೂ 1998ರ ವಿಶ್ವಕಪ್‌ ಟೂರ್ನಿ ವೇಳೆ ಕ್ರೊವೇಷ್ಯಾ ರಾಷ್ಟ್ರೀಯ ತಂಡದಲ್ಲಿ ಅವರು ಆಡಿದ್ದರು. 2012ರಿಂದ 2014ರ ಅವಧಿಯಲ್ಲಿ ಕ್ರೊವೇಷ್ಯಾ ತಂಡದ ಕೋಚ್‌ ಹುದ್ದೆ ನಿಭಾಯಿಸಿದ್ದರು. ಕ್ಲಬ್‌ ತಂಡಗಳಾದ ಹಾಜುಚ್ ಸ್ಪ್ಲಿಟ್‌, ಸಿಬಾಲಿಯಾ, ಎನ್‌ಕೆ ಜಾಗ್ರೆಬ್‌, ಹಾಗೂ ಝಡಾರ್‌, ಇರಾನ್‌ನ ಸೆಪಹಾನ್‌, ಕತಾರ್‌ನ ಅಲ್‌–ಶಹಾನಿಯಾ ತಂಡಗಳ ಕೋಚಿಂಗ್‌ ಜವಾಬ್ದಾರಿ ನಿಭಾಯಿಸಿದ್ದಾರೆ.