ಭಾರತ-– ನೇಪಾಳ ತೈಲ ಕೊಳವೆಮಾರ್ಗ ಉದ್ಘಾಟನೆ

0
18

ಭಾರತ–ನೇಪಾಳದ ನಡುವಣ ತೈಲ ಕೊಳವೆಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಸೆಪ್ಟೆಂಬರ್ 10 ರ ಮಂಗಳವಾರ ವಿಡಿಯೊ ಸಂವಾದದ ಮೂಲಕ ಉದ್ಘಾಟಿಸಿದರು.

ನವದೆಹಲಿ: ಭಾರತ–ನೇಪಾಳದ ನಡುವಣ ತೈಲ ಕೊಳವೆಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಸೆಪ್ಟೆಂಬರ್ 10  ರ   ಮಂಗಳವಾರ ವಿಡಿಯೊ ಸಂವಾದದ ಮೂಲಕ ಉದ್ಘಾಟಿಸಿದರು.

ದಕ್ಷಿಣ ಏಷ್ಯಾದ ಮೊದಲ ಅಂತರರಾಷ್ಟ್ರೀಯ ತೈಲ ಕೊಳವೆ ಮಾರ್ಗ ಇದಾಗಿದೆ. ಬಿಹಾರದ ಮೋತಿಹಾರಿಯಿಂದ ನೇಪಾಳದ ಅಮ್ಲೇಖಗಂಜ್‌ ಮಧ್ಯೆ ಈ ಕೊಳವೆಮಾರ್ಗವನ್ನು ನಿರ್ಮಿಸಲಾಗಿದೆ.

ಈಗ ಕೊಳವೆ ಮಾರ್ಗದ ಮೂಲಕ ಭಾರತದಿಂದ ನೇಪಾಳಕ್ಕೆ ವರ್ಷಪೂರ್ತಿ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಇದರಿಂದ ಪೂರೈಕೆಯಲ್ಲಿನ ವಿಳಂಬ ಮತ್ತು ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ನೇಪಾಳದಲ್ಲಿ ಎಲ್ಲಾ ಸ್ವರೂಪದ ಇಂಧನದ ಬೆಲೆಯನ್ನು ಪ್ರತಿ ಲೀಟರ್‌ಗೆ ₹ 2ರಷ್ಟು ಕಡಿಮೆ ಮಾಡಲಾಗಿದೆ.

ಈ ಕೊಳವೆಮಾರ್ಗವು 69 ಕಿ.ಮೀ.ನಷ್ಟು ಉದ್ದವಿದೆ. ಭಾರತದಲ್ಲಿ 33 ಕಿ.ಮೀ. ಮತ್ತು ನೇಪಾಳದಲ್ಲಿ 36 ಕಿ.ಮೀ.ನಷ್ಟು ಕೊಳವೆಮಾರ್ಗವಿದೆ. ₹ 324 ಕೋಟಿ ವೆಚ್ಚದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈ ಕೊಳವೆ ಮಾರ್ಗವನ್ನು ನಿರ್ಮಿಸಿದೆ. ಅಮ್ಲೇಖಗಂಜ್‌ನಲ್ಲಿ ಸಂಗ್ರಹಾಗಾರವನ್ನು ₹ 75 ಕೋಟಿ ವೆಚ್ಚದಲ್ಲಿ ನೇಪಾಳ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ ಮರುವಿನ್ಯಾಸಗೊಳಿಸಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಉಸ್ತುವಾರಿಯಲ್ಲಿ ಸಂಗ್ರಹಾಗಾರದ ಮರುವಿನ್ಯಾಸ ಕಾರ್ಯ ನಡೆಸಲಾಗಿದೆ.
 
ನೇಪಾಳಕ್ಕೆ ಅಗತ್ಯವಿರುವ ತೈಲವನ್ನು ಭಾರತವು ‘ಪೂರೈಕೆ ಒಪ್ಪಂದ’ದ ಮೂಲಕ ರಫ್ತು ಮಾಡುತ್ತದೆ. ಪ್ರತಿ ಐದು ವರ್ಷಕ್ಕೆ ಒಮ್ಮೆ ಈ ಒಪ್ಪಂದವನ್ನು ನವೀಕರಿಸಲಾಗುತ್ತದೆ. ಈ ಮೊದಲು ರಸ್ತೆ ಮೂಲಕ ಟ್ಯಾಂಕರ್‌ಗಳಲ್ಲಿ ತೈಲೋತ್ಪನ್ನಗಳನ್ನು ನೇಪಾಳಕ್ಕೆ ಸಾಗಿಸಲಾಗುತ್ತಿತ್ತು.