ಭಾರತ ಜೂನಿಯರ್‌ ಹಾಕಿ ಕೋಚ್‌ “ಜೂಡ್‌ ಫೆಲಿಕ್ಸ್” ವಜಾ

0
20

ಭಾರತ ಹಾಕಿ ಕ್ಷೇತ್ರದಲ್ಲಿ ಕೋಚ್‌ಗಳ ವಜಾ ಪರ್ವ ಮುಂದುವರಿದಿದೆ. ಭಾರತ ಜೂನಿಯರ್‌ ಪುರುಷರ ಹಾಕಿ ತಂಡದ ಕೋಚ್‌ ಜೂಡ್‌ ಫೆಲಿಕ್ಸ್ ಇದಕ್ಕೆ ಈಗ ಹೊಸ ಸೇರ್ಪಡೆ. ಈಚೆಗೆ ಮುಕ್ತಾಯಗೊಂಡ ಎಂಟು ರಾಷ್ಟ್ರಗಳ ಹಾಕಿ ಟೂರ್ನಿ ( 21 ವಯಸ್ಸಿನೊಳಗಿನವರ)ಯಲ್ಲಿ ಭಾರತ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದ್ದು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದು ಫೆಲಿಕ್ಸ್ ವಜಾಗೆ ಕಾರಣವಾಗಿದೆ.

ನವದೆಹಲಿ (ಪಿಟಿಐ): ಭಾರತ ಹಾಕಿ ಕ್ಷೇತ್ರದಲ್ಲಿ ಕೋಚ್‌ಗಳ ವಜಾ ಪರ್ವ ಮುಂದುವರಿದಿದೆ. ಭಾರತ ಜೂನಿಯರ್‌ ಪುರುಷರ ಹಾಕಿ ತಂಡದ ಕೋಚ್‌ ಜೂಡ್‌ ಫೆಲಿಕ್ಸ್ ಇದಕ್ಕೆ ಈಗ ಹೊಸ ಸೇರ್ಪಡೆ. ಈಚೆಗೆ ಮುಕ್ತಾಯಗೊಂಡ ಎಂಟು ರಾಷ್ಟ್ರಗಳ ಹಾಕಿ ಟೂರ್ನಿ ( 21 ವಯಸ್ಸಿನೊಳಗಿನವರ)ಯಲ್ಲಿ ಭಾರತ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದ್ದು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದು ಫೆಲಿಕ್ಸ್ ವಜಾಗೆ ಕಾರಣವಾಗಿದೆ.

ಜೂನ್ 19 ರ ಬುಧವಾರ ಕೋಚ್‌ ಹುದ್ದೆಗೆ ಹಾಕಿ ಇಂಡಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದಾಗಲೇ ವಿಷಯ ಬೆಳಕಿಗೆ ಬಂದಿತ್ತು.

ಹಾಲಿ ಜೂನಿಯರ್‌ ವಿಶ್ವ ಚಾಂಪಿಯನ್‌ ಆಗಿರುವ ಭಾರತ ತಂಡ ಇತ್ತೀಚೆಗೆ ನಿರಂತರ ಕಳಪೆ ಪ್ರದರ್ಶನ ನೀಡಿದ ಬಳಿಕ ಜೂಡ್‌ ಅವರ ತಲೆದಂಡ ನಿರೀಕ್ಷಿತವಾಗಿತ್ತು ಎಂದು ಹಾಕಿ ಇಂಡಿಯಾದ ಮೂಲಗಳು ತಿಳಿಸಿವೆ.

ಮ್ಯಾಡ್ರಿಡ್‌ನಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ಎಂಟು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಭಾರತ ಜೂನಿಯರ್‌ ತಂಡ ಆಸ್ಟ್ರೇಲಿಯಾ ವಿರುದ್ಧ 0–4, ನೆದರ್ಲೆಂಡ್ಸ್ ವಿರುದ್ಧ 2–3, ಸ್ಪೇನ್‌ ವಿರುದ್ಧ 1–3 ಹಾಗೂ ಬ್ರಿಟನ್‌ ತಂಡದ ವಿರುದ್ಧ 1–2 ಗೋಲುಗಳಿಂದ ಸೋಲು ಅನುಭವಿಸಿತ್ತು. ಆಸ್ಟ್ರಿಯಾ ವಿರುದ್ಧ ಮಾತ್ರ 4–2ರಿಂದ ಗೆಲುವು ಸಾಧಿಸುವಲ್ಲಿ  ಯಶಸ್ವಿಯಾಗಿತ್ತು.

2017ರ ಆಗಸ್ಟ್‌ನಲ್ಲಿ ಕೋಚ್‌ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದ ಜೂಡ್‌ ಈ ವಿಷಯವನ್ನು ಖಚಿತಪಡಿಸಿದ್ದಾರೆ.

‘ಹೌದು ನಾನು ಭಾರತ ಕಿರಿಯರ ತಂಡಕ್ಕೆ ಇನ್ನು ಮುಂದೆ ಕೋಚ್‌ ಆಗಿರುವುದಿಲ್ಲ. 2-3 ದಿನಗಳ ಹಿಂದೆ ಈ ವಿಷಯವನ್ನು ಇ–ಮೇಲ್‌ ಮೂಲಕ ತಿಳಿಸಿದ್ದೇನೆ’ ಎಂದು ಜೂಡ್‌ ಪ್ರತಿಕ್ರಿಯಿಸಿದರು. ತಾನು ವಜಾಗೊಂಡ ಬಗ್ಗೆ ಕಾರಣ ನೀಡಲಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗ ಈ ವಿಷಯದ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ’ ಎಂದರು.

ಮ್ಯಾಡ್ರಿಡ್‌ ಟೂರ್ನಿಯ ವರದಿಯನ್ನು ಒಂದು ಅಥವಾ ಎರಡು ದಿನಗಳಲ್ಲಿ ನೀಡುವೆನು ಎಂದು ಇದೇ ವೇಳೆ ಅವರು ತಿಳಿಸಿದರು.

ಜೂಡ್‌ ಫೆಲಿಕ್ಸ್ ತರಬೇತಿಯಲ್ಲಿ ಜೂನಿಯರ್‌ ಹಾಕಿ ತಂಡ ಎಂಟು ರಾಷ್ಟ್ರಗಳ ಟೂರ್ನಿಗಿಂತ ಮೊದಲು ನಡೆದ ‘ಸುಲ್ತಾನ್‌ ಆಫ್‌ ಜೊಹರ್‌ ಕಪ್‌’ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಬ್ರಿಟನ್‌ ಎದುರು ಕೈಚೆಲ್ಲಿತ್ತು.

ಹಾಕಿ ಇಂಡಿಯಾ ಪ್ರಕಟಿಸಿದ ಜಾಹೀರಾತು ಪ್ರಕಾರ, ನೂತನವಾಗಿ ನೇಮಕಗೊಳ್ಳುವ ಕೋಚ್‌ ಅವರ ಒಪ್ಪಂದ 2021ರ ಡಿಸೆಂಬರ್‌ 31ರವರೆಗೆ ಇರಲಿದೆ. ಅಂದರೆ ಜೂನಿಯರ್‌ ವಿಶ್ವಕಪ್‌ ಟೂರ್ನಿಯವರೆಗೆ. ಆರು ತಿಂಗಳ ಪ್ರೊಬೇಷನರಿ ಅವಧಿ ಇದೆ.

ಕೋಚ್‌ ಆಗಿ ನೇಮಕಗೊಂಡವರು ಹಾಕಿ ಇಂಡಿಯಾದ ಕಾರ್ಯಕಾರಿ ಮಂಡಳಿ ಮತ್ತು ಭಾರತ ಕ್ರೀಡಾ ಪ್ರಾಧಿಕಾರ ಅಲ್ಲದೆ ಹಿರಿಯರ ತಂಡದ ಕೋಚ್‌ ಗ್ರಹಾಂ ರೀಡ್‌, ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಡೇವಿಡ್‌ ಜಾನ್‌ ಅವರಿಗೂ ವರದಿ ಮಾಡಿಕೊಳ್ಳಬೇಕು.