ಭಾರತ–ಚೀನಾ–ಪಾಕ್‌ ಶೃಂಗಸಭೆಗೆ ಒಲವು

0
21

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಆತಿಥ್ಯದಲ್ಲಿ ಭಾರತ, ಚೀನಾ ಮತ್ತು ಪಾಕಿಸ್ತಾನ ನಡುವೆ ತ್ರಿಪಕ್ಷೀಯ ಸಹಕಾರದ ಚಿಂತನೆಗೆ ಭಾರತದಲ್ಲಿ ಚೀನಾದ ರಾಯಭಾರಿ ಲುವೊ ಝೊಹುಯ್‌ ಬೆಂಬಲ ಸೂಚಿಸಿದ್ದಾರೆ.

ನವದೆಹಲಿ: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಆತಿಥ್ಯದಲ್ಲಿ ಭಾರತ, ಚೀನಾ ಮತ್ತು ಪಾಕಿಸ್ತಾನ ನಡುವೆ ತ್ರಿಪಕ್ಷೀಯ ಸಹಕಾರದ ಚಿಂತನೆಗೆ ಭಾರತದಲ್ಲಿ ಚೀನಾದ ರಾಯಭಾರಿ ಲುವೊ ಝೊಹುಯ್‌ ಬೆಂಬಲ ಸೂಚಿಸಿದ್ದಾರೆ.

ಇಂತಹ ಸಭೆಯು ಭಾರತ ಮತ್ತು ಪಾಕಿಸ್ತಾನದ ನಡುವಣ ದ್ವಿಪಕ್ಷೀಯ ಸಮಸ್ಯೆಗಳನ್ನು ಪರಿಹರಿಸುವುದರ ಜತೆಗೆ ಈ ಪ್ರದೇಶದಲ್ಲಿ ಶಾಂತಿ ಕಾಪಾಡುವುದಕ್ಕೂ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ಚೀನಾದ ಸಂಬಂಧವು ಇನ್ನೊಂದು ದೋಕಲಾ ಬಿಕ್ಕಟ್ಟನ್ನು ತಾಳಿಕೊಳ್ಳಲಾರದು. ಹಾಗಾಗಿ ಗಡಿ ವಿವಾದಗಳಿಗೆ ಪರಸ್ಪರ ಸ್ವೀಕಾರಾರ್ಹವಾದ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾರತ, ಚೀನಾ ಮತ್ತು ಪಾಕಿಸ್ತಾನ ನಡುವೆ ತ್ರಿಪಕ್ಷೀಯ ಸಹಕಾರ ಸಭೆ ನಡೆಸಬೇಕು ಎಂದು ಭಾರತದ ಕೆಲವು ಗೆಳೆಯರು ಹೇಳಿದ್ದಾರೆ. ಇದು ಅತ್ಯಂತ ರಚನಾತ್ಮಕ ಯೋಚನೆ. ಭದ್ರತಾ ಸಹಕಾರವು ಶಾಂಘೈ ಸಹಕಾರ ಸಂಘಟನೆಯ ಮೂರು ಸ್ತಂಭಗಳಲ್ಲಿ ಒಂದಾಗಿದೆ.

ಚೀನಾ ರಾಯಭಾರ ಕಚೇರಿಯು ಭಾರತ–ಚೀನಾ ಸಂಬಂಧದ ಬಗ್ಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಚೀನಾದ ಕ್ವಿಂಗ್ಡಾವೊದಲ್ಲಿ ಕಳೆದ ವಾರ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್‌ ಹುಸೇನ್‌ ಅವರು ಪರಸ್ಪರ ಶುಭ ಹಾರೈಸಿಕೊಂಡಿದ್ದರು. ಆದರೆ, ಇಬ್ಬರು ಮುಖಂಡರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿರಲಿಲ್ಲ.

ಭಾರತ ಮತ್ತು ಚೀನಾ ದೇಶಗಳು ಗೆಳೆತನ ಮತ್ತು ಸಹಕಾರದ ಒಪ್ಪಂದಕ್ಕೆ ಸಹಿ ಹಾಕಬೇಕು. ಇಂತಹ ಒಪ್ಪಂದವೊಂದರ ಕರಡು ಪ್ರತಿಯನ್ನು 10 ವರ್ಷಗಳ ಹಿಂದೆಯೇ ಭಾರತಕ್ಕೆ ನೀಡಲಾಗಿದೆ ಎಂಬುದನ್ನು ಲುವೊ ನೆನಪಿಸಿಕೊಂಡರು.

ಅಫ್ಗಾನಿಸ್ತಾನದ ವಿಚಾರದಲ್ಲಿಯೂ ಭಾರತ ಮತ್ತು ಚೀನಾ ನಡುವೆ ಸಹಕಾರ ಇದೆ. ಅಲ್ಲಿನ ಅಧಿಕಾರಿಗಳು ಮತ್ತು ರಾಜತಂತ್ರಜ್ಞರಿಗೆ ತರಬೇತಿ ನೀಡುವ ಯೋಜನೆಯೊಂದನ್ನು ಎರಡೂ ದೇಶಗಳು ಜಂಟಿಯಾಗಿ ಕೈಗೆತ್ತಿಕೊಳ್ಳ ಲಿವೆ ಎಂದು ಲುವೊ ತಿಳಿಸಿದ್ದಾರೆ.

ಇದು ಮೊದಲ ಹೆಜ್ಜೆ. ಮುಂದೆ ಇಂತಹ ಹಲವು ಕಾರ್ಯಕ್ರಮ ಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.
*
ಚರಿತ್ರೆಯ ಬಳುವಳಿ
ಭಾರತ ಮತ್ತು ಚೀನಾದ ನಡುವಣ ಗಡಿ ವಿವಾದ ಚರಿತ್ರೆಯು ಬಿಟ್ಟು ಹೋದ ಬಳುವಳಿ. ಹಾಗಾಗಿ ಈ ಸಮಸ್ಯೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ವಿಶೇಷ ಪ್ರತಿನಿಧಿಗಳ ನಡುವೆ ಮಾತುಕತೆ ಮೂಲಕ ಈ ಸಮಸ್ಯೆಗೆ ಪರಸ್ಪರ ಒಪ್ಪಿತವಾದ ಪರಿಹಾರವನ್ನು ಕಂಡುಕೊಳ್ಳಬೇಕು. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ವಿಶ್ವಾಸವೃದ್ಧಿ ಕೆಲಸಗಳು ನಡೆಯಬೇಕು ಎಂದು ಲುವೊ ಅಭಿಪ್ರಾಯಪಟ್ಟಿದ್ದಾರೆ.
*
ಸಹಕಾರ ಹಿಗ್ಗಿಸಿ ಭಿನ್ನಾಭಿಪ್ರಾಯ ಕುಗ್ಗಿಸಬೇಕು. ಆದರೆ, ಭಿನ್ನಾಭಿಪ್ರಾಯಗಳನ್ನು ನಿರ್ಲಕ್ಷಿಸಬೇಕು ಎಂಬುದು ಅದರ ಅರ್ಥ ಅಲ್ಲ.
ಲುವೊ ಝೊಹುಯ್‌, ಚೀನಾದ ರಾಯಭಾರಿ