ಭಾರತ ಕ್ರಿಕೆಟ್​​ ದಿಗ್ಗಜ ಸಚಿನ್​​ ತೆಂಡೂಲ್ಕರ್​​ಗೆ “ಐಸಿಸಿ ಹಾಲ್​​​ ಆಫ್​ ಫೇಮ್​​ ಗೌರವ”

0
63

ಅಂತಾರಾಷ್ಟ್ರೀಯ ಕ್ರಿಕೆಟ್​​ ಸಮಿತಿ (ಐಸಿಸಿ) ನೀಡುವ ಪ್ರತಿಷ್ಠಿತ ಹಾಲ್​​ ಆಫ್​​ ಫೇಮ್​​​​​​​ ಗೌರವಕ್ಕೆ ಭಾರತ ಕ್ರಿಕೆಟ್​ ದಿಗ್ಗಜ ಸಚಿನ್​​ ತೆಂಡೂಲ್ಕರ್​ ಸೇರಿದಂತೆ ದಕ್ಷಿಣ ಆಫ್ರಿಕಾದ ಅಲನ್​​ ಡೊನಾಲ್ಡ್​​ ಹಾಗೂ ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಕ್ಯಾಥ್ರಿನ್​​​​ ಪಿಟ್ಜ್​​ಪ್ಯಾಟ್ರಿಕ್​​​​​​ ಅವರು ಪಾತ್ರರಾದರು.

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್​​ ಸಮಿತಿ (ಐಸಿಸಿ) ನೀಡುವ ಪ್ರತಿಷ್ಠಿತ ಹಾಲ್​​ ಆಫ್​​ ಫೇಮ್​​​​​​​ ಗೌರವಕ್ಕೆ ಭಾರತ ಕ್ರಿಕೆಟ್​ ದಿಗ್ಗಜ ಸಚಿನ್​​ ತೆಂಡೂಲ್ಕರ್​ ಸೇರಿದಂತೆ ದಕ್ಷಿಣ ಆಫ್ರಿಕಾದ ಅಲನ್​​ ಡೊನಾಲ್ಡ್​​ ಹಾಗೂ ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಕ್ಯಾಥ್ರಿನ್​​​​ ಪಿಟ್ಜ್​​ಪ್ಯಾಟ್ರಿಕ್​​​​​​ ಅವರು ಪಾತ್ರರಾದರು.

ಲಂಡನ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಗೌರವಕ್ಕೆ ಪಾತ್ರರಾದರು. ಕ್ರಿಕೆಟ್​ ಜಗತ್ತಿನಲ್ಲಿ ಮೋಡಿ ಮಾಡಿರುವ ಸಚಿನ್​​ ತೆಂಡುಲ್ಕರ್​​​ ಹಾಲ್​​​ ಆಫ್​​ ಫೇಮ್​​ ಪಡೆದ ಭಾರತದ ಆರನೇ ಆಟಗಾರರಾಗಿದ್ದಾರೆ. ಇದಕ್ಕೂ ಮೊದಲು ಅನಿಲ್​​ ಕುಂಬ್ಳೆ, ಸುನೀಲ್​ ಗವಾಸ್ಕರ್​​, ಬಿಶನ್​​ ಸಿಂಗ್​​ ಬೇಡಿ, ಕಪಿಲ್​​ ದೇವ್​​​​ ಹಾಗೂ ರಾಹುಲ್​​ ದ್ರಾವಿಡ್​​​ ಈ ಗೌರವಕ್ಕೆ ಪಾತ್ರರಾಗಿದ್ದರು.

ಸಚಿನ್​​ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 200 ಟೆಸ್ಟ್​ಗಳಲ್ಲಿ 51 ಶತಕ ಹಾಗೂ 68 ಅರ್ಧ ಶತಕಳೊಂದಿಗೆ 15,921 ರನ್​​​​​ಗಳನ್ನು ಗಳಿಸಿದ್ದರೆ, 463 ಏಕದಿನ ಪಂದ್ಯಗಳಲ್ಲಿ 49 ಶತಕ ಹಾಗೂ 96 ಅರ್ಧ ಶತಗಳೊಂದಿಗೆ 18,426 ರನ್​​ ಗಳನ್ನು ಸಿಡಿಸುವ ಮೂಲಕ ದಾಖಲೆ ಸೃಷ್ಟಿಸಿದ್ದರು. ಈ ಎಲ್ಲ ಸಾಧನೆಯನ್ನು ಗುರುತಿಸಿ ಐಸಿಸಿ ಅವರನ್ನು ಗೌರವಿಸಿದೆ. ಅವರು 2013ರಲ್ಲಿ ತಮ್ಮ ಕೊನೆಯ ಟೆಸ್ಟ್​​ ಪಂದ್ಯವನ್ನು ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ವಿದಾಯ ಹೇಳಿದ್ದರು.

ಈ ಗೌರವವನ್ನು ಪಡೆದುಕೊಂಡಿರುವುದಕ್ಕೆ ಬಹಳ ಖುಷಿಯಾಗಿದೆ. ನನ್ನ ಕ್ರಿಕೆಟ್​ ವೃತ್ತಿ ಜೀವನದ ಎಲ್ಲ ಹಂತಗಳಲ್ಲಿ ಪ್ರೋತ್ಸಾಹ ನೀಡಿದ ನನ್ನ ತಂದೆ-ತಾಯಿ, ತಮ್ಮ ಅಜಿತ್​​, ಪತ್ನಿ ಅಂಜಲಿ ಹಾಗೂ ಕೋಚ್​​​​​ ರಾಮಕಾಂತ್​​ ಅಚ್ರೇಕರ್​​​​​​​​​​ ಅವರಿಗೆ ಈ ಗೌರವ ಸಲ್ಲಬೇಕು ಎಂದು ಸಂತಸ ವ್ಯಕ್ತಪಡಿಸಿದರು.

ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಅಲನ್​​ ಡೊನಾಲ್ಡ್​​ 72 ಟೆಸ್ಟ್​​ ಪಂದ್ಯಗಳಲ್ಲಿ 330 ಹಾಗೂ 164 ಏಕದಿನ ಪಂದ್ಯಗಳಲ್ಲಿ 272 ವಿಕೆಟ್​​ಗಳನ್ನು ಪಡೆದಿದ್ದರು. ಅವರು 2003ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಈ ಸಾಧನೆಯನ್ನು ಗುರುತಿಸಿ ಐಸಿಸಿ ಅವರಿಗೆ ಈ ಗೌರವ ನೀಡಿದೆ. ಅಲ್ಲದೇ ಕ್ಯಾಥ್ರಿನ್​​​​ ಪಿಟ್ಜ್​​ಪ್ಯಾಟ್ರಿಕ್​​​​​​ ಐಸಿಸಿ ಮಹಿಳೆಯರ ವಿಶ್ವಕಪ್​ನ ಎರಡು ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡ ಕಪ್​​​​​​ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ತಮ್ಮ ವೃತ್ತಿ ಜೀವನದಲ್ಲಿ ಆಡಿದ 13 ಟೆಸ್ಟ್​ಗಳಲ್ಲಿ 60 ವಿಕೆಟ್​​ ಹಾಗೂ 109 ಏಕದಿನ ಪಂದ್ಯಗಳಲ್ಲಿ 180 ವಿಕೆಟ್​ ಕಬಳಿಸಿದ್ದರು. ಈ ಮೂಲಕ ಅವರು ಹಾಲ್​​​ ಆಫ್​​ ಫೇಮ್​​ ಗೌರವಕ್ಕೆ ಭಾಜನರಾದ ವಿಶ್ವದ ಎಂಟನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.(ಏಜೆನ್ಸೀಸ್​)