ಭಾರತೀಯ ಸೇನೆ ವಿರುದ್ಧ ಘರ್ಷಣೆಗೆ ಪಾಕ್‌ ಮಕ್ಕಳ ಬಳಕೆ: ವಿಶ್ವಸಂಸ್ಥೆ

0
15

ಪಾಕಿಸ್ತಾನ ಮೂಲದ ನಿಷೇಧಿತ ಜೈಷೆ ಮೊಹಮ್ಮದ್‌ ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಗಳು ಜಮ್ಮು -ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧದ ಘರ್ಷಣೆಗೆ ಮಕ್ಕಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ನ್ಯೂಯಾರ್ಕ್‌: ಪಾಕಿಸ್ತಾನ ಮೂಲದ ನಿಷೇಧಿತ ಜೈಷೆ ಮೊಹಮ್ಮದ್‌ ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಗಳು ಜಮ್ಮು -ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧದ ಘರ್ಷಣೆಗೆ ಮಕ್ಕಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. 

ಮಕ್ಕಳ ಮತ್ತು ಸಶಸ್ತ್ರ ಸಂಘರ್ಷ ಕುರಿತಾದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ವಾರ್ಷಿಕ ವರದಿ ಪ್ರಕಾರ, 2017ರಲ್ಲಿ ಜಗತ್ತಿನಾದ್ಯಂತ ಹತ್ತು ಸಾವಿರ ಮಕ್ಕಳನ್ನು ಹತ್ಯೆ ಮಾಡಲಾಗಿದೆ. ಕಳೆದ ವರ್ಷ ಎಂಟು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಉಗ್ರ ಸಂಘಟನೆಗಳು ನೇಮಕ ಮಾಡಿಕೊಂಡಿದ್ದು, ಅವರನ್ನು ವಿಧ್ವಂಸಕ ಕೃತ್ಯಗಳಿಗೆ ಬಳಸಲಾಗುತ್ತಿದೆ ಎಂದು ತಿಳಿಸಿದೆ.

ಜಮ್ಮು -ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸಲು ಹಾಗೂ ಭಾರತೀಯ ಸೇನೆ ವಿರುದ್ಧ ಸಂಘರ್ಷ ನಡೆಸಲು ಈ ಎರಡು ಉಗ್ರ ಸಂಘಟನೆಗಳು ಮಕ್ಕಳನ್ನು ನೇಮಕ ಮಾಡಿಕೊಂಡಿದೆ. ಜತೆಗೆ ಭಾರತೀಯ ಸೇನೆ ವಿರುದ್ಧ ಬೇಹುಗಾರಿಕೆ ನಡೆಸಲು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಛತ್ತೀಸ್‌ಗಢ, ಜಾರ್ಖಂಡ್‌ ಹಾಗೂ ಜಮ್ಮು-ಕಾಶ್ಮೀರದಲ್ಲಿ ಉಗ್ರರು, ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವಿನ ಸಂಘರ್ಷದಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನಲ್ಲಿ ನಕ್ಸಲರು ಮಕ್ಕಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅವರನ್ನು ಭದ್ರತಾ ಪಡೆಗಳ ವಿರುದ್ಧ ಹೋರಾಟದಲ್ಲಿ ಬಳಸುತ್ತಿದ್ದಾರೆ ಎಂದೂ ತಿಳಿಸಿದೆ. 

ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಶಾಲೆ ಸೇರಿದಂತೆ ಮದರಸಾಗಳಿಂದ ಮಕ್ಕಳನ್ನು ನೇಮಕ ಮಾಡಿಕೊಂಡು, ಅವರನ್ನು ಆತ್ಮಹತ್ಯಾ ದಾಳಿ ಸೇರಿದಂತೆ ಉಗ್ರ ಚಟುವಟುಕೆಗಳಿಗೆ ಬಳಸಿಕೊಳ್ಳುತ್ತಿರುವುದು ಮುಂದುವರಿದಿದೆ. ಕಳೆದ ಜನವರಿಯಲ್ಲಿ ತೆಹ್ರಿಕ್‌-ಇ-ತಾಲಿಬಾನ್‌ ಪಾಕಿಸ್ತಾನ ಸಂಘಟನೆಯು ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಾಲಕಿಯರು ಸೇರಿದಂತೆ ಮಕ್ಕಳನ್ನು ಆತ್ಮಹತ್ಯಾ ದಾಳಿಗೆ ಪ್ರೇರೇಪಿಸುತ್ತಿರುವುದು, ತರಬೇತಿ ನೀಡುತ್ತಿರುವುದು ಬಹಿರಂಗವಾಗಿದೆ. 

ಉಗ್ರ ಸಂಘಟನೆಗಳಿಂದ ಪಾಕ್‌ ಶಾಲೆಗಳ ಮೇಲೆ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳ ಶಾಲೆಗಳ ಮೇಲೆ ದಾಳಿ ಮುಂದುವರಿದಿದೆ. ಈ ಸಂದರ್ಭದಲ್ಲಿ ನೂರಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನ ಸರಕಾರ ಮುಂದಿನ ದಿನಗಳಲ್ಲಿ ಈ ರೀತಿಯ ದಾಳಿಗಳು ನಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ಸೂಚನೆ ನೀಡಿದ್ದಾರೆ. 

ಸಿರಿಯಾ, ಆಫಘಾನಿಸ್ತಾನ, ಯೆಮೆನ್‌, ಪಿಲಿಪ್ಫಿಸ್ಸ್‌, ನೈಜಿರಿಯಾ ಸೇರಿದಂತೆ ಜಗತ್ತಿನ 20 ರಾಷ್ಟ್ರಗಳಲ್ಲಿ ಉಗ್ರ ಸಂಘಟನೆಗಳು ಮಕ್ಕಳನ್ನು ಬಳಸಿಕೊಳ್ಳುತ್ತಿದೆ ಎಂದು ವರದಿ ತಿಳಿಸಿದೆ. 

ನಕ್ಸಲರು ತಮ್ಮ ಕೃತ್ಯಗಳಿಗೆ ಮಕ್ಕಳನ್ನು ನೇಮಕಗೊಳಿಸುವುದನ್ನು ತಡೆಗಟ್ಟಲು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಪೂರ್ಣ ವಿರಾಮ ಹಾಕಲು ವಿಶ್ವಸಂಸ್ಥೆಯೊಂದಿಗೆ ಭಾರತ ಸರಕಾರ ಕೈಜೋಡಿಸಬೇಕು. 

ಆಂಟೋನಿಯೊ ಗುಟೆರೆಸ್‌, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ