ಭಾರತೀಯ ಸೇನೆಗೆ ಆರು ‘ಧನುಷ್‌’ ಸೇರ್ಪಡೆ (ದೇಶಿಯವಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಫಿರಂಗಿಗಳು)

0
386

ಬೊಫೋರ್ಸ್‌ ತಂತ್ರಜ್ಞಾನ ಆಧಾರಿತ ಮತ್ತು ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಆರು ‘ಧನುಷ್‌’ ಫಿರಂಗಿ ಗನ್‌ಗಳನ್ನು
ಏಪ್ರೀಲ್ 8 ರ ಸೋಮವಾರ ಸೇನೆಗೆ ಸೇರ್ಪಡೆ ಮಾಡಲಾಯಿತು.

ನವದೆಹಲಿ: ಬೊಫೋರ್ಸ್‌ ತಂತ್ರಜ್ಞಾನ ಆಧಾರಿತ ಮತ್ತು ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಆರು ‘ಧನುಷ್‌’ ಫಿರಂಗಿ ಗನ್‌ಗಳನ್ನು  ಏಪ್ರೀಲ್ 8 ರ  ಸೋಮವಾರ ಸೇನೆಗೆ ಸೇರ್ಪಡೆ ಮಾಡಲಾಯಿತು.

ಜಬಲ್‌ಪುರ್‌ದಲ್ಲಿರುವ ಕಾರ್ಖಾನೆಯಲ್ಲಿ ಈ ಗನ್‌ಗಳನ್ನು ತಯಾರಿಸಲಾಗಿದೆ.  ಫಿರಂಗಿಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ದೇಶಿಯವಾಗಿ ತಯಾರಿಸುವಂತೆ ರಕ್ಷಣಾ ಸಚಿವಾಲಯ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿಗೆ ಸೂಚನೆ ನೀಡಿತ್ತು.

ಜಬಲ್‌ಪುರ ಕಾರ್ಖಾನೆ ಮತ್ತಷ್ಟು ಶ್ರಮವಹಿಸಿ ಮೂಲ ಗನ್‌ಗಳಿಗಿಂತಲೂ ಹಲವು ಸುಧಾರಣೆಗಳನ್ನು ಕೈಗೊಂಡಿದೆ.

ಭಾರತೀಯ ಸೇನೆ ಒಟ್ಟು 114 ಗನ್‌ಗಳನ್ನು ತಯಾರಿಸುವಂತೆ ಸೂಚಿಸಿದೆ. ಇದಕ್ಕಾಗಿ 1,700 ಕೋಟಿ ಮೊತ್ತ ಮೀಸಲಿರಿಸಲಾಗಿದೆ. ಈಗ ಪ್ರಥಮ ಹಂತದಲ್ಲಿ ಆರು ಗನ್‌ಗಳನ್ನು ಸೇನೆಗೆ ಹಸ್ತಾಂತರಿಸಲಾಗಿದೆ. ಗನ್‌ಗಳ ಹಸ್ತಾಂತರ ಕಾರ್ಯಕ್ರಮ ಜಬಲ್‌
ಪುರ್‌ದಲ್ಲಿ ನಡೆಯಿತು.

ನಿಗದಿಪಡಿಸಿದ್ದ ಅವಧಿಗಿಂತ ಮೂರು ವರ್ಷ ವಿಳಂಬವಾಗಿ ಗನ್‌ಗಳನ್ನು ಸೇನೆಗೆ ನೀಡಲಾಯಿತು. ಪ್ರಯೋಗದ ಸಂದರ್ಭದಲ್ಲಿ ಹಲವು ರೀತಿಯ ತೊಡಕುಗಳು ಕಂಡುಬಂದಿದ್ದರಿಂದ ವಿಳಂಬವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗನ್‌ಗಳ ತುದಿಗಳು ಮುರಿದುಬಿದ್ದಿದ್ದರಿಂದ ಮತ್ತು ಬ್ಯಾರಲ್‌ ಸ್ಫೋಟಗೊಂಡಿದ್ದರಿಂದ ಎಂಜಿನಿಯರ್‌ಗಳು ವಿನ್ಯಾಸ ಮತ್ತು ತಾಂತ್ರಿಕತೆಯ ಸುಧಾರಣೆ ಕೈಗೊಂಡರು. ಈ ಸಮಸ್ಯೆಗಳು ಬಗೆಹರಿದ ಬಳಿಕ ಅಂತಿಮ ಪ್ರಯೋಗವನ್ನು 2018ರ ಜೂನ್‌ನಲ್ಲಿ ಜೈಸಲ್ಮೆರ್‌ನಲ್ಲಿ ಕೈಗೊಳ್ಳಲಾಯಿತು. ಇಲ್ಲಿ ಒಂದು ದಿನದಲ್ಲಿ 50 ಸುತ್ತುಗಳ ದಾಳಿ ನಡೆಸುವ ಸಾಮರ್ಥ್ಯದ ಬಗ್ಗೆ ಯಶಸ್ವಿ ಪ್ರಯೋಗ ನಡೆಸಲಾಯಿತು ಎಂದು ತಿಳಿಸಿದ್ದಾರೆ.

 ‘ಭಾರತದಲ್ಲೇ ತಯಾರಿಸಿ’ ಎನ್ನುವ ನೀತಿ ಅಡಿಯಲ್ಲಿ ‘ಧನುಷ್‌’ ಯೋಜನೆ ಯಶಸ್ವಿಯಾಗಿರುವುದು ಮಹತ್ವದ್ದಾಗಿದೆ ಎಂದು ಹಸ್ತಾಂತರ ಕಾರ್ಯಕ್ರಮದಲ್ಲಿದ್ದ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ ಅಧ್ಯಕ್ಷ ಸೌರಭ್‌ ಕುಮಾರ್‌ ಅವರು ಬಣ್ಣಿಸಿದ್ದಾರೆ.

‘ಲಾರಿಗಳ ಮೇಲೆ ಅಳವಡಿಸಲು ಸುಲಭವಾಗುವ ಧನುಷ್‌ ಗನ್‌ಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ’ ಎಂದು ಕುಮಾರ್ ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ (ಒಎಫ್‌ಬಿ), ಸೇನೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಗುಣಮಟ್ಟ ಖಾತರಿ ಮಹಾನಿರ್ದೇಶನಾಲಯ, ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌), ಭಾರತೀಯ ಉಕ್ಕು ಪ್ರಾಧಿಕಾರ ಲಿಮಿಟೆಡ್‌ ಮತ್ತು ಹಲವು ಖಾಸಗಿ ಕಂಪನಿಗಳ ಜಂಟಿ ಪ್ರಯತ್ನದಿಂದ ‘ಧನುಷ್‌’ ಅಭಿವೃದ್ಧಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಿಡನ್‌ನ ಬೊಫೋರ್ಸ್‌ ಗನ್‌ಗಳನ್ನು ಮೇಲ್ದರ್ಜೆಗೇರಿಸಿದ ಅತ್ಯಾಧುನಿಕ ಶಸ್ತ್ರಾಸ್ತ್ರ ಇದಾಗಿದೆ.

‘ಧನುಷ್‌’ ಫಿರಂಗಿ ಗನ್‌ ವೈಶಿಷ್ಟ್ಯ

# 38 ಕಿಲೋ ಮೀಟರ್‌ವರೆಗೆ ವ್ಯಾಪ್ತಿಯವರೆಗೆ ದಾಳಿ ನಡೆಸುವ ಸಾಮರ್ಥ್ಯ.

# ಬೊಫೋರ್ಸ್‌ 27 ಕಿಲೋ ಮೀಟರ್‌ವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿತ್ತು.

ಬೊಫೋರ್ಸ್‌ ಎಫ್‌ಎಚ್‌–77ಬಿ ಗನ್‌ ತಂತ್ರಜ್ಞಾನ ಆಧಾರಿತ

#  ಗನ್‌ ತೂಕ 13 ಟನ್‌

# ಬೊಫೋರ್ಸ್‌ಗಿಂತಲೂ 700 ಕಿಲೋ ಗ್ರಾಂ ಹೆಚ್ಚು ತೂಕ

#  87 ಮಿಲಿ ಮೀಟರ್‌ ಉದ್ದದ ಬ್ಯಾರಲ್‌

#  ಹಲವು ವ್ಯವಸ್ಥೆಗಳು ಸ್ವಯಂ ಚಾಲಿತ

# ಒಂದೇ ಗುರಿಗೆ ಏಕಕಾಲಕ್ಕೆ ಮೂರರಿಂದ ಆರು ಗನ್‌ಗಳನ್ನು ಬಳಸಿ ದಾಳಿ ನಡೆಸಲು ಅವಕಾಶ

#  ಹಗಲು ಮತ್ತು ರಾತ್ರಿ ದಾಳಿ ನಡೆಸುವ ವ್ಯವಸ್ಥೆ

ಗುಡ್ಡಗಾಡು ಪ್ರದೇಶದಲ್ಲೂ ಸುಲಭವಾಗಿ ಕೊಂಡೊಯ್ಯಬಹುದು

# ಎಲ್ಲ ವಾತಾವರಣಗಳಲ್ಲೂ ಕಾರ್ಯಾಚರಣೆಗೆ ಬಳಸಬಹುದು

# ಪ್ರತಿ ಫಿರಂಗಿ ಗನ್‌ಗೆ 15 ಕೋಟಿ ರೂ

# ಜಿಪಿಎಸ್‌ ವ್ಯವಸ್ಥೆ ಹೊಂದಿದೆ.